Asianet Suvarna News Asianet Suvarna News

ಪೋಷಕರೇ ಎಚ್ಚರ: 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು..!

*   ಮಗನನ್ನು ಫ್ಲ್ಯಾಟ್‌ನಲ್ಲೇ ಬಿಟ್ಟು ಹೂ ಕುಂಡ ಖರೀದಿಗೆ ತೆರಳಿದ್ದ ಪೋಷಕರು
*   ಪೋಷಕರು ಮರಳಿ ಫ್ಲ್ಯಾಟ್‌ಗೆ ಬಂದು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ
*  ಶೋಭಾ ವ್ಯಾಲಿ ಅಪಾರ್ಟ್‌ಮೆಂಟ್‌ನಲ್ಲಿ ಅವಘಡ
 

Death of Boy Who Fell From the 11th Floor Apartment in Bengaluru grg
Author
Bengaluru, First Published Oct 2, 2021, 9:20 AM IST
  • Facebook
  • Twitter
  • Whatsapp

ಬೆಂಗಳೂರು(ಅ.02): ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಸಮೀಪ ನಡೆದಿದೆ.

ಹೊಸಕೆರೆಹಳ್ಳಿಯ ಶೋಭಾ ವ್ಯಾಲಿ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಪ್ರದೀಪ್‌ ಹಾಗೂ ಆರತಿ ದಂಪತಿ ಒಬ್ಬನೇ ಮಗ ಗಗನ್‌(11) ಮೃತ ದುರ್ದೈವಿ. ತನ್ನ ತಂದೆ-ತಾಯಿ ಹೊರ ಹೋಗಿದ್ದಾಗ ಗುರುವಾರ ಮಧ್ಯಾಹ್ನ ಅಪಾರ್ಟ್‌ಮೆಂಟ್‌ನ 11ನೇ ಮಹಡಿಗೆ ತೆರಳಿದ ಗಗನ್‌, ಅಲ್ಲಿಂದ 5ನೇ ಮಹಡಿಗೆ ಬಿದ್ದು ಮೃತಪಟ್ಟಿದ್ದಾನೆ. ಕೆಲ ಹೊತ್ತಿನ ಬಳಿಕ ಫ್ಲ್ಯಾಟ್‌ಗೆ ಮರಳಿದ ಮೃತನ ಪೋಷಕರು, ಮಗನಿಗೆ ಹುಡುಕಾಟ ನಡೆಸಿದಾಗ 5ನೇ ಮಹಡಿಯಲ್ಲಿ ಗಗನ್‌ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಬ್ಬನನ್ನ ಬಿಟ್ಟು ಹೋಗಿದ್ದರು?

ನೆಲಮಂಗಲ ತಾಲೂಕಿನ ಪ್ರದೀಪ್‌ ಅವರು, ಹಲವು ವರ್ಷಗಳಿಂದ ಹೊಸಕೆರೆಹಳ್ಳಿ ಸಮೀಪದ ಶೋಭಾ ವ್ಯಾಲಿ ಅಪಾರ್ಟ್‌ಮೆಂಟ್‌ನ 11ನೇ ಹಂತದ ಫ್ಲ್ಯಾಟ್‌ನಲ್ಲಿ ಪತ್ನಿ ಆರತಿ ಹಾಗೂ ಪುತ್ರ ಗಗನ್‌ ಜತೆ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರು ಉದ್ಯೋಗದಲ್ಲಿದ್ದರೆ, ಪತ್ನಿ ಗೃಹಿಣಿ. ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅವರ ಪುತ್ರ ಗಗನ್‌ ಓದುತ್ತಿದ್ದ. ಕೊರೋನಾ ಕಾರಣ ಹಿನ್ನಲೆಯಲ್ಲಿ ಶಾಲೆಗೆ ತೆರಳದೆ ಮನೆಯಲ್ಲೇ ಆತ ಆನ್‌ ಲೈನ್‌ ಪಾಠ ಕೇಳುತ್ತಿದ್ದ. ತಮ್ಮ ಫ್ಲ್ಯಾಟ್‌ನಲ್ಲಿ ಗಿಡಗಳನ್ನು ಬೆಳೆಸಲು ನಿರ್ಧರಿಸಿದ್ದ ಪ್ರದೀಪ್‌ ದಂಪತಿ, ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಹೂ ಕುಂಡಗಳ ಖರೀದಿಗೆ ತೆರಳಿದ್ದರು. ಆ ವೇಳೆ ಫ್ಲ್ಯಾಟ್‌ನಲ್ಲೇ ಮಗನನ್ನು ಬಿಟ್ಟು ಅವರು ಹೋಗಿದ್ದರು. ಇತ್ತ ತಂದೆ-ತಾಯಿ ಹೊರ ಹೋದ ಬಳಿಕ ಗಗನ್‌, ಫ್ಲ್ಯಾಟ್‌ನಿಂದ ಹೊರಬಂದು ಟೆರೇಸ್‌ಗೆ ಹೋಗಿದ್ದಾನೆ. ಅಲ್ಲಿಂದ ಆತ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಕೊರೋನಾಗೆ ಪತಿ ಬಲಿ: ಮನನೊಂದು ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ

ಹೂಕುಂಡ ಖರೀದಿಸಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರದೀಪ್‌ ದಂಪತಿ ಮರಳಿದ್ದಾರೆ. ಆಗ ಮನೆಯಲ್ಲಿ ಮಗ ಕಾಣದೆ ಹೋದಾಗ ಆತಂಕಗೊಂಡ ಅವರು, ನೆರೆಹೊರೆಯಲ್ಲಿ ವಿಚಾರಿಸಿದಾಗಲೂ ಎಲ್ಲು ಕಂಡಿಲ್ಲ. ಆಗ ಟೆರೇಸ್‌ಗೆ ಹೋಗಿ ಇಣುಕಿದಾಗ 5ನೇ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಕರೆ ಮಾಡಿ ವಿಷಯ ತಿಳಿಸಿದರು. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸಾಗಿಸಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕವೋ?, ಆತ್ಮಹತ್ಯೆಯೋ?

ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಿಂದ ಆಕಸ್ಮಿಕವಾಗಿಯೋ ಅಥವಾ ತಾನಾಗಿಯೇ ಗಗನ್‌ ಬಿದ್ದಿದ್ದಾನೆ ಎಂಬುದು ಖಚಿತವಾಗಿಲ್ಲ. ತನ್ನ ಫ್ಲ್ಯಾಟ್‌ನಿಂದ ಟೆರೇಸ್‌ಗೆ ಆತ ತೆರಳುವ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದೆ. ಒಬ್ಬನೇ ಮಗನಾಗಿದ್ದರಿಂದ ಗಗನ್‌ನನ್ನು ತುಂಬಾ ಮುದ್ದಿನಿಂದ ಪ್ರದೀಪ್‌ ದಂಪತಿ ಸಾಕಿದ್ದರು. ಈ ಘಟನೆಯಿಂದ ಅವರಿಗೆ ಆಘಾತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

Follow Us:
Download App:
  • android
  • ios