ಬೆಂಗಳೂರು(ಜು.08): ಬಸವನಗುಡಿ ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಕೋ ಆಪರೇಟಿವ್‌ ಸೊಸೈಟಿಗಳ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ವಾಸುದೇವ ಮಯ್ಯ ಅವರು ಸೋಮವಾರ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಐದು ಪುಟಗಳ ‘ಡೆತ್‌ ನೋಟ್‌’ ಪತ್ತೆಯಾಗಿದೆ.

ಈ ಮರಣ ಪತ್ರದಲ್ಲಿ ಬ್ಯಾಂಕಿನ ಬಹುಕೋಟಿ ಹಗರಣದ ಕುರಿತು ಸವಿಸ್ತಾರವಾಗಿ ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಈಗ ಪತ್ರ ಲಭಿಸಿದ ಹಿನ್ನೆಲೆಯಲ್ಲಿ ಸಿಇಓ ಆತ್ಮಹತ್ಯೆ ಹಾಗೂ ಅವರು ಎದುರಿಸಿದ ವಂಚನೆ ಪ್ರಕರಣಗಳಿಗೆ ಮಹತ್ವದ ತಿರುವು ಸಿಕ್ಕಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಮ್ಮ ಸ್ನೇಹಿತರನ್ನು ಭೇಟಿ ಮಾಡಿ ಬರುವುದಾಗಿ ಕುಟುಂಬದವರಿಗೆ ಹೇಳಿ ಚಿಕ್ಕಲಸಂದ್ರದ ಮನೆಯಿಂದ ಮಧ್ಯಾಹ್ನ 12 ಗಂಟೆಗೆ ಮಯ್ಯ ಹೊರಟಿದ್ದಾರೆ. ಅನಂತರ ಕೆಲವು ಗೆಳೆಯರನ್ನು ಕಂಡು ಮಾತನಾಡಿದ ಅವರು, ಬ್ಯಾಂಕಿನ ಹಗರಣದಲ್ಲಿ ತಮ್ಮನ್ನು ಸಿಲುಕಿಸಲಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ಇದಾದ ಬಳಿಕ ರಾತ್ರಿ 7.30ರ ಸುಮಾರಿಗೆ ಪೂರ್ಣಪ್ರಜ್ಞ ಲೇಔಟ್‌ನ ಉತ್ತರಹಳ್ಳಿ ರಸ್ತೆಗೆ ಬಂದಿದ್ದು, ಅಲ್ಲಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಯ್ಯ ಆತ್ಮಹತ್ಯೆ ಸಂಬಂಧ ಯಾರ ಮೇಲೂ ಮೃತರ ಕುಟುಂಬ ಸದಸ್ಯರು ಆರೋಪ ಮಾಡಿಲ್ಲ. ಮಯ್ಯ ಹಿರಿಯ ಮಗಳು ನೀಡಿದ ದೂರಿನ ಮೇರೆಗೆ ಸಿಆರ್‌ಪಿಸಿ 174ರ (ಅಸಹಜ ಸಾವು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರಿನ ಹಿಂಬದಿ ಸೀಟಲ್ಲಿ ಡೆತ್‌ನೋತ್‌ ಪತ್ತೆ:

ಪೂರ್ಣಪ್ರಜ್ಞ ಲೇಔಟ್‌ನಲ್ಲಿ ಕಾರು ನಿಲ್ಲಿಸಿದ ಬಳಿಕ ಮಯ್ಯ ಅವರು ಹಿಂಬದಿ ಸೀಟಿನಲ್ಲಿ ಕುಳಿತು ವಿಷ ಸೇವಿಸಿದ್ದಾರೆ. ಕಾರಿನಲ್ಲಿ ಅರೆ ಪ್ರಜ್ಞೆಯಾಗಿ ಅಪರಿಚಿತ ವ್ಯಕ್ತಿ ಬಿದ್ದಿರುವುದನ್ನು ನೋಡಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಬಳಿಕ ಕಾರಿನ ಬಾಗಿಲನ್ನು ಮೆಕ್ಯಾನಿಕ್‌ ಕರೆಸಿ ತೆಗೆದು ಪರಿಶೀಲಿಸಿದಾಗ ಮೃತರ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಳಿಕ ಮೃತರ ಕಾರನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು. ಆಗ ಹಿಂಬದಿ ಸೀಟಿನ ಬಳಿ ಐದು ಪುಟಗಳ ಮರಣ ಪತ್ರ (ಡೆತ್‌ ನೋಟ್‌) ಸಿಕ್ಕಿದೆ. ಈ ಪತ್ರದಲ್ಲಿ ತಾವು ಕೆಲಸ ಮಾಡಿದ್ದ ಬ್ಯಾಂಕಿನ ಹಣಕಾಸು ವ್ಯವಹಾರ ಕುರಿತು ಅವರು ಬರೆದಿದ್ದಾರೆ. ಅವುಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

400 ಕೋಟಿ ವಂಚನೆ ಆರೋಪ

ಗುರುರಾಘವೇಂದ್ರ ಬ್ಯಾಂಕಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಸಿಇಓ ಮಯ್ಯ ಅವರು, ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಈ ಬ್ಯಾಂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು .1400 ಕೋಟಿ ವಂಚಿಸಿದ ಆರೋಪ ಕೇಳಿ ಬಂದಿತ್ತು. ಇದರಲ್ಲಿ ಸಿಇಓ ವಿರುದ್ಧ .400 ಕೋಟಿ ಆಪಾದನೆ ಬಂದಿತ್ತು. ಈ ಬಗ್ಗೆ ಸಿಐಡಿ ತನಿಖೆ ಆರಂಭಿಸಿದ ಕೂಡಲೇ ಖಿನ್ನತೆಗೊಳಗಾಗಿ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.