Asianet Suvarna News Asianet Suvarna News

ಬೈಕ್‌ ಡಿಕ್ಕಿಯಾಗಿ ರಾಜಕಾಲುವೆಗೆ ಹಾರಿ ಬಿದ್ದಿದ್ದ ಡೆಲಿವರಿ ಬಾಯ್‌ ಮೃತದೇಹ 3 ದಿನ ಬಳಿಕ ಪತ್ತೆ

ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಗೆ ಬಿದ್ದು ಸವಾರ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಮೂರು ದಿನಗಳ ಬಳಿಕ ಸವಾರನ ಮೃತದೇಹ ರಾಜ ಕಾಲುವೆಯಲ್ಲಿ ಪತ್ತೆಯಾಗಿದೆ. 

Dead body of delivery boy found in Rajakaluve at Bengaluru gvd
Author
First Published Jul 8, 2024, 7:15 AM IST | Last Updated Jul 8, 2024, 11:20 AM IST

ಬೆಂಗಳೂರು (ಜು.08): ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಗೆ ಬಿದ್ದು ಸವಾರ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಮೂರು ದಿನಗಳ ಬಳಿಕ ಸವಾರನ ಮೃತದೇಹ ರಾಜ ಕಾಲುವೆಯಲ್ಲಿ ಪತ್ತೆಯಾಗಿದೆ. ಬ್ಯಾಟರಾಯನಪುರ ನಿವಾಸಿ ಹೇಮಂತ್ ಕುಮಾರ್ (28) ಮೃತ ಸವಾರ. ಕಳೆದ 3 ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಾಜಕಾಲುವೆಯಲ್ಲಿ ಹೇಮಂತ್‌ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದರು. ಭಾನುವಾರ ಬೆಳಗ್ಗೆ ಸುಮಾರು 8.30ಕ್ಕೆ ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮೇಲಕ್ಕೆ ಎತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಕುಟುಂಬಕ್ಕೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆಗಳ ನಡುವಿನ ಕಂದಕಕ್ಕೆ ಬಿದ್ದಿದ್ದ: ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣ ಸಮೀಪದ ಇರುವ ದ್ವಿಮುಖ ರಸ್ತೆಗಳ ಪೈಕಿ ಒಂದು ಮೈಸೂರು ಕಡೆಗೆ ಮತ್ತೊಂದು ಬ್ಯಾಟರಾಯನಪುರ ಕಡೆಗೆ ಸಂಪರ್ಕಿಸುತ್ತದೆ. ಈ ಎರಡು ರಸ್ತೆಗಳ ಮಾರ್ಗದಲ್ಲಿ ರಾಜಕಾಲುವೆ ಹಾದು ಹೋಗಿರುವುದರಿಂದ ಸೇತುವೆ ನಿರ್ಮಿಸಲಾಗಿದೆ. ಆದರೆ, ಈ ಎರಡು ಸೇತುವೆಗಳ ನಡುವೆ ಸುಮಾರು 3-4 ಅಡಿ ಅಗಲದ ಕಂದಕವಿದೆ. ಹೇಮಂತ್‌ ಕುಮಾರ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಮೇಲಕ್ಕೆ ಹಾರಿ ಈ ಕಂದಕದ ಮುಖಾಂತರ ರಾಜಕಾಲುವೆಗೆ ಬಿದ್ದಿದ್ದರು.

ಮೃತದೇಹ ತೇಲಿದ ಪರಿಣಾಮ ಪತ್ತೆ: ತಲೆ ಕೆಳಗಾಗಿ ರಾಜಕಾಲುವೆಗೆ ಬಿದ್ದಿದ್ದ ಪರಿಣಾಮ ದೇಹದ ಅರ್ಧದಷ್ಟು ಭಾಗ ಕೆಸರಿನಲ್ಲಿ ಹೂತುಕೊಂಡಿತ್ತು. ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಮೃತದೇಹ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಮೃತದೇಹ ನೀರಿನಲ್ಲಿ ತೇಲಿದ ಪರಿಣಾಮ ಪತ್ತೆಯಾಗಿದೆ. ಹೇಮಂತ್‌ ನಾಪತ್ತೆ ಹಿನ್ನೆಲೆಯಲ್ಲಿ ಜ್ಞಾನಭಾರತಿ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಸಂಚಾರ ಠಾಣೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿವೈಡರ್‌ಗೆ ಬೈಕ್‌ ಡಿಕ್ಕಿ: ರಾಜಕಾಲುವೆಗೆ ಬಿದ್ದ ಡೆಲಿವರಿ ಬಾಯ್‌ ನಾಪತ್ತೆ!

ಏನಿದು ಘಟನೆ?: ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್, ಶುಕ್ರವಾರ ರಾತ್ರಿ ಸುಮಾರು 10.30ಕ್ಕೆ ಕೆಲಸ ಮುಗಿಸಿಕೊಂಡು ಮೈಸೂರು ರಸ್ತೆಯ ಜ್ಞಾನಭಾರತಿ ಕಡೆಯಿಂದ ಬ್ಯಾಟರಾಯನಪುರ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹೇಮಂತ್‌ ಪಕ್ಕದಲ್ಲೇ ಇರುವ ರಾಜಕಾಲುವೆಗೆ ಹಾರಿ ಬಿದ್ದಿದ್ದರು. ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿತ್ತಾದರೂ ಸವಾರನ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಜ್ಞಾನಭಾರತಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸವಾರ ಹೇಮಂತ್‌ಗಾಗಿ ಹುಡುಕಾಟ ಆರಂಭಿಸಿದ್ದರು.

Latest Videos
Follow Us:
Download App:
  • android
  • ios