Asianet Suvarna News Asianet Suvarna News
breaking news image

ಡಿವೈಡರ್‌ಗೆ ಬೈಕ್‌ ಡಿಕ್ಕಿ: ರಾಜಕಾಲುವೆಗೆ ಬಿದ್ದ ಡೆಲಿವರಿ ಬಾಯ್‌ ನಾಪತ್ತೆ!

ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರ ನಿವಾಸಿ ಹೇಮಂತ್ ಕುಮಾರ್ (28) ನಾಪತ್ತೆಯಾಗಿರುವ ಸವಾರ. 
 

Bike collided with the divider Delivery boy who fell into the rajakaluve is missing gvd
Author
First Published Jul 7, 2024, 8:08 AM IST

ಬೆಂಗಳೂರು (ಜು.07): ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರ ನಿವಾಸಿ ಹೇಮಂತ್ ಕುಮಾರ್ (28) ನಾಪತ್ತೆಯಾಗಿರುವ ಸವಾರ. ಶುಕ್ರವಾರ ರಾತ್ರಿ ಸುಮಾರು 10.30ಕ್ಕೆ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಕಳೆದ 2 ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸವಾರನ ಪತ್ತೆಗೆ ರಾಜಕಾಲುವೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಭಾನುವಾರವೂ ಶೋಧ ಕಾರ್ಯ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿ ಹೋಗಿರುವ ಸಾಧ್ಯತೆ: ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ , ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಮೈಸೂರು ರಸ್ತೆಯ ಜ್ಞಾನಭಾರತಿ ಕಡೆಯಿಂದ ಬ್ಯಾಟರಾಯನಪುರ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹೇಮಂತ್‌ ಪಕ್ಕದಲ್ಲೇ ಇರುವ ರಾಜಕಾಲುವೆಗೆ ಹಾರಿ ಬಿದ್ದಿದ್ದಾರೆ. ರಾತ್ರಿ ಸುರಿದ ಭಾರೀ ಮಳೆಯಿಂದ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೇಮಂತ್‌ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ.

ಮುಂದುವರೆದ ಶೋಧ ಕಾರ್ಯ: ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಶುಕ್ರವಾರ ತಡರಾತ್ರಿವರೆಗೂ ರಾಜಕಾಲುವೆಯಲ್ಲಿ ಶೋಧ ಕಾರ್ಯ ನಡೆಸಿದರು. ಹೇಮಂತ್‌ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಶನಿವಾರ ಮುಂಜಾನೆಯಿಂದ ತಡರಾತ್ರಿವರೆಗೂ ರಾಜಕಾಲುವೆಯಲ್ಲಿ ಸುಮಾರು 2-3 ಕಿ.ಮೀ. ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಹೀಗಾಗಿ ಭಾನುವಾರವೂ ಶೋಧ ಕಾರ್ಯ ಮುಂದುವರೆಯಲಿದೆ. ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಡಾದಲ್ಲಿ ಹಗರಣ ಆಗಿಲ್ಲವಾದರೆ ತನಿಖೆ ಯಾಕೆ?: ಎಚ್‌.ಡಿ.ಕುಮಾರಸ್ವಾಮಿ

ಸೇತುವೆಗಳ ನಡುವಿನ ಕಂದಕದಿಂದ ಅವಘಡ: ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣ ಸಮೀಪದ ಇರುವ ದ್ವಿಮುಖ ರಸ್ತೆಗಳ ಪೈಕಿ ಒಂದು ಮೈಸೂರು ಕಡೆಗೆ ಮತ್ತೊಂದು ಬ್ಯಾಟರಾಯನಪುರ ಕಡೆಗೆ ಸಂಪರ್ಕಿಸುತ್ತದೆ. ಈ 2 ರಸ್ತೆಗಳ ಮಾರ್ಗದಲ್ಲಿ ರಾಜಕಾಲುವೆ ಹಾದು ಹೋಗಿರುವುದರಿಂದ ಸೇತುವೆ ನಿರ್ಮಿಸಲಾಗಿದೆ. ಆದರೆ, ಈ 2 ಸೇತುವೆಗಳ ನಡುವೆ ಸುಮಾರು 3-4 ಅಡಿ ಅಗಲದ ಕಂದಕವಿದೆ. ಹೇಮಂತ್‌ ಕುಮಾರ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಈ ಕಂದಕದ ಮುಖಾಂತರ ರಾಜಕಾಲುವೆಗೆ ಹಾರಿ ಬಿದ್ದಿರುವ ಸಾಧ್ಯತೆಯಿದೆ. ಬಿಬಿಎಂಪಿ ಈ ಕಂದಕ ಮುಚ್ಚದ ಹಿನ್ನೆಲೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios