Crime News: 5 ವರ್ಷದ ಮಗಳು ಬೆಡ್‌ಶೀಟ್ ತಂದುಕೊಡಲಿಲ್ಲವೆಂದು ಸಿಟ್ಟಿಗೆದ್ದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದಿರುವ ಭೀಕರ ಘಟನೆ ಉತ್ತರ ಪ್ರದೇಶದದಲ್ಲಿ ವರದಿಯಾಗಿದೆ
ಗಾಜಿಯಾಬಾದ್ (ಅ. 15): 5 ವರ್ಷದ ಮಗಳು ಬೆಡ್‌ಶೀಟ್ ತಂದುಕೊಡಲಿಲ್ಲವೆಂದು ಸಿಟ್ಟಿಗೆದ್ದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದಿರುವ ಭೀಕರ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ. 35 ವರ್ಷದ ಶಬಾನಾ ಮೃತ ದುರ್ದೈವಿ. ಮಸೂರಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಶಾದಾಬ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಆರೋಪಿ ತನ್ನ ಮಗಳು ಸಬಾಳನ್ನು ಬೆದಡ್‌ಶೀಟ್ ತರುವಂತೆ ಹೇಳಿದರೂ ಆಕೆ ಆಟವಾಡುತ್ತಿದ್ದರಿಂದ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಶಾದಾಬ್‌ಗೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಘಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ. ಆರೋಪಿ ತನ್ನ 35 ವರ್ಷದ ಹೆಂಡತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಪತ್ನಿ ಇದನ್ನು ವಿರೋಧಿಸಿದಾಗ ಶಾದಾಬ್ ಆಕೆಗೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ.
ಕೂಡಲೇ ಶಬಾನಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಬಾನಾ ತಂದೆ ಅಲಿ ಹಸನ್ ಶಾದಾಬ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಲವರ್‌ಗಾಗಿ ಪ್ರಿಯತಮೆ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದ ಯುವಕನನ್ನು ಕೊಂದ ಯುವತಿ ಮನೆಯವರು..!
ಬೆಂಗಳೂರು: ವೈಯಕ್ತಿಕ ಕಾರಣಕ್ಕೆ ಸೋದರ ಸಂಬಂಧಿಯ ಇರಿದು ಕೊಲೆ: ವೈಯಕ್ತಿಕ ಕಾರಣಕ್ಕೆ ತನ್ನ ಸೋದರ ಸಂಬಂಧಿಯನ್ನು ಚಾಕುವಿನಿಂದ ಇರಿದು ಆಟೋ ಚಾಲಕನೊಬ್ಬ ಹತ್ಯೆಗೈದಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಕನಕಪುರ ರಸ್ತೆಯ ಯಲಚೇನಹಳ್ಳಿ ನಿವಾಸಿ ಮಾರುತಿ (24) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸೋದರ ಸಂಬಂಧಿ ಅಶೋಕ್‌ನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಪ್ಪಸಂದ್ರದ ಗುರುಸಿದ್ದೇಶ್ವರ ಚಿತ್ರಮಂದಿರ ಸಮೀಪ ಮಾರುತಿಯನ್ನು ಅಡ್ಡಗಟ್ಟಿಶುಕ್ರವಾರ ಸಂಜೆ 6.30ರ ಸುಮಾರಿಗೆ ಚಾಕುವಿನಿಂದ ಇರಿದು ಅಶೋಕ್ ಪರಾರಿಯಾಗಿದ್ದ. ಕೂಡಲೇ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಾರುತಿ ಹಾಗೂ ಅಶೋಕ್ ಸೋದರ ಸಂಬಂಧಿಗಳಾಗಿದ್ದು, ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ತಿಪ್ಪಸಂದ್ರ ಸಮೀಪದ ದ್ವಿಚಕ್ರ ವಾಹನ ಮಾರಾಟ ಮಳಿಗೆಯಲ್ಲಿ ಮಾರುತಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ಆತ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಕೃತ್ಯ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
