Chikkaballapura; ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಡೇಂಜರ್ ಆಕ್ಸಿಡೆಂಟ್ ಸ್ಟಾಟ್
ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಡೇಂಜರ್ ಆಕ್ಸಿಡೆಂಟ್ ಸ್ಟಾಟ್, ಹಲವರು ಪ್ರಾಣ ಕಳೆದುಕೊಂಡರೂ ಕೇಳೋರೇ ಇಲ್ಲ. ಪ್ರಾಣ ತೆಗೆಯುತ್ತಿದೆ ಯಮ ಸ್ವರೂಪಿ ಸ್ಪಾಟ್.
ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕಬಳ್ಳಾಪುರ (ಸೆ.23): ರೈಲ್ವೆ ಸೇತುವೆಗಳೇ ಹಾಗೇ ಒಂದು ದೂರ ದೃಷ್ಟಿ ಇಲ್ಲದೇ ಕಟ್ಟಿದ್ದಾರೆ ಎಂಬ ಅಪವಾಧವಿದೆ. ಹೌದು ಈ ಯೋಜನೆಯಿಂದ ಈಗ ಹತ್ತಾರು ಜನರು ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಂದಹಾಗೆ ಇದು ಇರೋದು ಶಿಡ್ಲಘಟ್ಟ - ಚಿಕ್ಕಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಬರುವ ಸೇತುವೆಯ ದುರಂತ ಕಥೆ. ರಸ್ತೆಯೇನೋ ಚೆನ್ನಾಗೇ ಇದೆ. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾತವಾರ ಹೊಸಹಳ್ಳಿ ಬಳಿ ಇರುವ ರೈಲ್ವೇ ಅಂಡರ್‌ಪಾಸ್ ಮಾತ್ರ ವಾಹನ ಸವಾರರ ಪಾಲಿಗೆ ಯಮನ ಅಂಡರ್ ಪಾಸ್ ಆಗಿ ಮಾರ್ಪಟ್ಟಿದೆ. ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟದವರೆಗೂ ಸಂಚರಿಸುವ ಬಹುತೇಕ ವಾಹನಗಳು ಶರವೇಗದಲ್ಲೇ ಸಂಚರಿಸುತ್ತವೆ. ಆದರೆ ಅದೇ ವೇಗದಲ್ಲಿ ಏನಾದರೂ ಈ ಸೇತುವೆಯಡಿ ಬಂದರೆ ಅಪಘಾತ ಕಟ್ಟಿಟ್ಟ ಬುತ್ತಿ. ಪ್ರತಿ ತಿಂಗಳು ಇಲ್ಲಿ ಐದಾರು ಅಪಘಾತಗಳು ಸಂಭವಿಸುತ್ತಿವೆ. ದೊಡ್ಡ ಅಪಘಾತಗಳು, ಸಣ್ಣ ಪುಟ್ಟ ಅಪಘಾತಗಳು ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದು ಬೃಹತ್ ಗಾತ್ರದ ವಾಹನಗಳು ಎಗ್ಗಿಲ್ಲದ ಸಂಚಾರ ಇಲ್ಲಿ ಮಾಮೂಲಿ. ಹೀಗಾಗಿ ಈ ಸೇತುವೆ ಬಳಿ ತಿರುವು ಪಡೆದುಕೊಳ್ಳುವುದೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಇಲ್ಲಿ ಸ್ವಲ್ಪ ಆಯಾ ತಪ್ಪಿದರೂ ವಾಹನಗಳು ಉರುಳಿ ಬೀಳುತ್ತವೆ.
ಸೇತುವೆ ಬಳಿ ಡಿಕ್ಕಿ ಸರ್ವೇ ಸಾಮಾನ್ಯ: ಕಳೆದ ಎರಡು ತಿಂಗಳ ಅವಧಿಯಲ್ಲೇ ಎರಡು ದೊಡ್ಡ ಲಾರಿಗಳು ಇಲ್ಲಿ ಉರುಳಿ ಬಿದ್ದಿದ್ದವು. ಸಣ್ಣ ಪ್ರಮಾಣದ ಟೆಂಪೋಗಳು, ಗೂಡ್ಸ್ ಗಾಡಿಗಳು ಇಲ್ಲಿ ಉರುಳುವುದು ಸಾಮಾನ್ಯವಾಗಿದೆ. ಕೇವಲ ನಾಲ್ಕು ಚಕ್ರದ ವಾಹನಗಳು ಮಾತ್ರವಲ್ಲ. ದ್ವಿಚಕ್ರ ವಾಹನ ಸವಾರರು ಇಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ವಾಹನಗಳನ್ನು ಚಲಾಯಿಸಬೇಕು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ.
ದ್ವಿಚಕ್ರ ಸವಾರರಿಗೆ ಕಂಟಕ: ಎದುರಿನಿಂದ ಬರುವ ವಾಹನಗಳು ತಿರುವು ಪಡೆಯಲು ಇಡೀ ರಸ್ತೆಯನ್ನು ಬಳಸುವುದರಿಂದ ದ್ವಿಚಕ್ರ ವಾಹನ ಸವಾರರು ಈ ಸೇತುವೆ ಕೆಳಗಡೆ ಹೋಗಲು ಹರ ಸಾಹಸಪಡಬೇಕು. ಸ್ವಲ್ಪ ಮೈ ಮರೆತರೆ ನೇರವಾಗಿ ವಾಹನಗಳಡಿಗೆ ಸೇರಬೇಕಾಗುತ್ತದೆ. ಇನ್ನು ಇಲ್ಲಿ ವಾಹನಗಳು ಕೆಲವರ ಮೇಲೆ ಹರಿದು ಹಾಗೆಯೇ ಹೋಗುವುದು ಸಾಮಾನ್ಯವಾಗಿದ್ದು ಕೆಲವರು ಸಾವು ಬದುಕಿನ ನಡುವೆ ಆಸ್ಪತ್ರೆಗಳನ್ನು ಸೇರುವಂತಾಗಿದೆ.
ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ, ಎಸ್ಪಿ ಲಕ್ಷ್ಮೀಪ್ರಸಾದ್ ಸುದ್ದಿಗೋಷ್ಠಿ
ಕತ್ತಲ ಸೇತುವೆ ಇದು ಆಕ್ಸಿಡೆಂಟ್ ಸ್ಟಾಟ್: ಈ ಸೇತುವೆ ಬಳಿ ಯಾವುದೇ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ನೆಪ ಮಾತ್ರಕ್ಕೆ ಕೆಲವು ಬಾಣದ ಗುರುತಿನ ಫಲಕಗಳನ್ನು ಹಾಕಿ ಬಿಡಲಾಗಿದೆ. ರಸ್ತೆ ಉಬ್ಬುಗಳನ್ನು ಹಾಕಲಾಗಿದೆಯಾದರೂ ಅಪಾಯಕಾರಿ ಸೇತುವೆ ಎಂದು ಬಿಂಬಿಸುವ ಯಾವುದೇ ಫಲಕಗಳನ್ನು ಇಲ್ಲಿ ಹಾಕಿಲ್ಲ. ಹೀಗಾಗಿ ರಾತ್ರಿ ವೇಳೆ ಈ ಸೇತುವೆ ಕೆಳಗೆ ಸಂಚರಿಸಲು ಜನರು ಹಿಂದೇಟು ಹಾಕುವಂತಾಗಿದೆ. ಯಾವ ಘಳಿಗೆಯಲ್ಲಿ ಯಾವ ವಾಹನ ಬಂದು ಡಿಕ್ಕಿ ಹೊಡೆಯುತ್ತೋ ಎನ್ನುವ ಭಯ ಜನರನ್ನು ಆವರಿಸಿದೆ. ಸ್ಥಳೀಯರಿಗೆ ಈ ಸೇತುವೆಯ ಅಪಾಯದ ಅರಿವಿರುತ್ತೆ. ಆದರೆ ಯಾರಾದರೂ ಹೊಸಬರು ಬಂದರೆ ಅಪಾಯ ತೆರೆದು ಕೂತಿರುತ್ತೆ. ಮುಂಜಾಗ್ರತೆ ವಹಿಸಿದರೆ ಬಚಾವ್ ಇಲ್ಲವಾದರೆ ಪ್ರಾಣಕ್ಕೆ ಸಂಚಕಾರ ಬರುವುದು ಗ್ಯಾರೆಂಟಿ.
VIJAYANAGARA; ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ
ಏನು ಮಾಡಬಹುದು: ಈ ರಸ್ತೆಯನ್ನು ನಿರ್ಮಿಸುವ ವೇಳೆ ಇಂಥ ಕಡಿದಾದ ತಿರುವಿರುವ ಕೆಳಸೇತುವೆ ಬಗ್ಗೆ ಯಾರು ಪ್ಲಾನ್ ಕೊಟ್ಟರೋ ಗೊತ್ತಿಲ್ಲ. ಆದರೆ ಇನ್ನು ಮುಂದಕ್ಕೆ ಸ್ವಲ್ಪ ಜಮೀನನ್ನು ಸ್ವಾಧೀನಪಡಿಸಿಕೊಂಡು ನೇರವಾಗಿ ರಸ್ತೆಯನ್ನು ನಿರ್ಮಿಸಿ ಮುಂದೆ ಎಲ್ಲಾದರೂ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬಹುದಿತ್ತು. ಆದರೆ ಅವೈಜ್ಞಾನಿಕ ಕ್ರಮದಿಂದ ಜನರು ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಸದ್ಯಕ್ಕೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದೆ ಮೇಲ್ಸೇತುವೆ ಅಥವಾ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.