ದಾಂಡೇಲಿಯಲ್ಲಿ ಸಾಲದ ಭಾರದಿಂದಾಗಿ ದಂಪತಿಯೊಬ್ಬರು ತಮ್ಮ 20 ದಿನದ ಮಗುವನ್ನು ₹3 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಮಗುವಿನ ಪೋಷಕರು ನಾಪತ್ತೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಲದ ಒತ್ತಡದಿಂದ ಕಂಗಾಲಾದ ದಂಪತಿಯೊಬ್ಬರು ತಮ್ಮ ಕೇವಲ 20 ದಿನದ ಗಂಡು ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೂರ್ ಅಹ್ಮದ್ ನಾಯ್ಕ (47) ಮತ್ತು ಕಿಶನ್ ಐರೇಕರ (42) ಬಂಧಿತ ಆರೋಪಿಗಳು. ಹಳೇ ದಾಂಡೇಲಿಯ ದೇಶಪಾಂಡೆ ನಗರದ ಮಾಹೀನ್‌ ಚಂದುಪಟೇಲ್ ಜೂ.17ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತಂದೆ-ತಾಯಿ ತುಂಬ ಸಾಲ ಮಾಡಿದ್ದರು. ಸಾಲ ಕೊಟ್ಟವರು ಕಿರುಕುಳ ನೀಡುತ್ತಿದ್ದರಿಂದ ಜುಲೈ 8ರಂದು ಧಾರವಾಡಕ್ಕೆ ತೆರಳಿ ಬೆಳಗಾವಿಯ ನೂ‌ರ್ ಅಹಮ್ಮದ್‌ ಎಂಬವರಿಗೆ ಸುಮಾರು ₹3 ಲಕ್ಷಕ್ಕೆ ಮಾರಿದ್ದಾರೆ ಎನ್ನಲಾಗಿದೆ..

ಪೊಲೀಸರ ಪ್ರಕಾರ, ಮಗುವನ್ನು ಖರೀದಿಸಿದ ವ್ಯಕ್ತಿ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಚಾಲಕನನ್ನು ಬಂಧಿಸಲಾಗಿದೆ. ಸದ್ಯ, ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಲಾಗಿದೆ. ಆದರೆ, ಮಗುವಿನ ತಂದೆ-ತಾಯಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಾನೂನು ವಿರುದ್ಧವಾಗಿ ಮಗುವಿನ ಮಾರಾಟಕ್ಕೆ ಸಂಬಂಧಿಸಿದಂತೆ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತನಿಖೆಯ ಹೆಚ್ಚಿನ ವಿವರಗಳಿಗಾಗಿ ಗಮನಿಸುತ್ತಿರಿ.