ಬಾಂಗ್ಲಾದೇಶದ ಮಹಿಳೆಯನ್ನು ಪ್ರೀತಿಸಿ ಅಕ್ರಮವಾಗಿ ಭಾರತಕ್ಕೆ ಕರೆತರಲು ಯತ್ನಿಸಿದ ಬೀದರ್ ವ್ಯಕ್ತಿಯೊಬ್ಬ ಜೈಲು ಪಾಲಾಗಿದ್ದಾನೆ. ತ್ರಿಪುರಾದಲ್ಲಿ ಗಡಿ ದಾಟುವಾಗ ಬಂಧಿತರಾದ ಈ ಜೋಡಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬೀದರ್ (ಜುಲೈ.13): ಬಾಂಗ್ಲಾದೇಶದ ಮಹಿಳೆಯನ್ನು ಪ್ರೀತಿಸಿದ್ದ ಬೀದರ್ ವ್ಯಕ್ತಿವೊಬ್ಬ ಆಕೆಯನ್ನು ಅಕ್ರಮವಾಗಿ ಗಡಿದಾಟುವ ಮೂಲಕ ಭಾರತಕ್ಕೆ ಕರೆತರಲು ಯತ್ನಿಸಿದ್ದು, ಇಬ್ಬರು ಪ್ರೇಮಿಗಳು ಈಗ ಜೈಲು ಪಾಲಾಗಿರುವ ಪ್ರಸಂಗ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಬೀದರ್ ತಾಲೂಕಿನ ಕಮಠಾಣಾ ಗ್ರಾಮದ ಗುತ್ತಿಗೆದಾರ ದತ್ತಾ ಯಾದವ್ ಹಾಗೂ ಬಾಂಗ್ಲಾದೇಶ ಬೋಗರಾ ಜಿಲ್ಲೆಯ 35 ವರ್ಷದ ಮಹಿಳೆ ಬಂಧಿತರು. ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ತ್ರಿಪುರಾ ಗಡಿದಾಟುತ್ತಿದ್ದ ಮಾಹಿತಿ ಸಿಕ್ಕ ಕೂಡಲೇ ಬುಧವಾರ ಬಿಎಸ್‌ಎಫ್ ಯೋಧರು ಈ ಜೋಡಿಯನ್ನು ವಶಕ್ಕೆ ಪಡೆದು ನಂತರ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪಾಸ್‌ಪೋರ್ಟ್ ಕಾಯ್ದೆ, ವಿದೇಶಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ದೂರು ದಾಖಲಿಸಿಕೊಂಡು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಇಬ್ಬರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎನ್ನಲಾಗಿದೆ.
ಬೀದರ್ ಟು ಬಾಂಗ್ಲಾ ಲವ್ ಸ್ಟೋರಿ:
ಬಾಂಗ್ಲಾದ 35 ವಯಸ್ಸಿನ ಮಹಿಳೆ ಮೊದಲು ಮುಂಬೈನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಬೀದರ್‌ನ ದತ್ತಾ ಯಾದವ್ ಪರಿಚಯವಾಗಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಕೆಲ ದಿನಗಳ ನಂತರ ಯುವತಿ ತಮ್ಮ ದೇಶಕ್ಕೆ ವಾಪಸ್ಸಾಗಿದ್ದಾಳೆ. ಆದರೆ, ಪ್ರಿಯಕರ ಯಾದವ್ ಹೇಗಾದರೂ ಮಾಡಿ ಬಾಂಗ್ಲಾದೇಶದಿಂದ ಯುವತಿಯನ್ನು ವಾಪಸ್ ಕರೆಸಲು ತಂತ್ರ ಹೆಣೆದಿದ್ದು, ಅಕ್ರಮವಾಗಿ ಗಡಿದಾಟಿಸಿ ಕರೆತರಲು ಯತ್ನಿಸಿದ್ದಾನೆ. ಆಗ ತ್ರಿಪುರಾದ ಸೆಪಹಿಜಾಲಾದಲ್ಲಿ ಇಬ್ಬರೂ ಇರುವುದನ್ನು ಗಡಿ ಭದ್ರತಾ ಪಡೆಯ ಗುಪ್ತ ಮಾಹಿತಿ ಪಡೆದುಕೊಂಡು ಜೋಡಿಯನ್ನು ವಶಕ್ಕೆ ಪಡೆಯಲಾಗಿದೆ.
ಮಾನವ ಸಾಗಾಣಿಕೆ ಹಂತದಲ್ಲೂ ತನಿಖೆ:
ತ್ರಿಪುರಾ ಪೊಲೀಸರ ಪ್ರಕಾರ ಈ ಮಹಿಳೆಯನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿರುವ ಏಜೆಂಟ್‌ನ ಪತ್ತೆ ಹಚ್ಚುವುದಲ್ಲದೆ ಅಕ್ರಮ ಮಾನವ ಸಾಗಾಟ ಹಂತದಲ್ಲೂ ತನಿಖೆ ನಡೆಸಲು ಯೋಚಿಸಲಾಗಿದ್ದು, ಈ ಜೋಡಿಯನ್ನು ಪೊಲೀಸರು ಕಸ್ಟಡಿಗೂ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
