Chikkamagaluru; ದಲಿತ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಪ್ರಕರಣ, ಹಲ್ಲೆಯಿಂದ ನಡೀತಾ ಗರ್ಭಪಾತ!?

ದಲಿತ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಪ್ರಕರಣ  ಆರೋಪಿಗಳಾದ ತೋಟದ ಮಾಲೀಕ ಜಗದೀಶ್, ತಿಲಕ್  ವಿರುದ್ದ ಪ್ರಕರಣ ದಾಖಲು.  ಹಲ್ಲೆ ಮಾಡಿದ ಹಿನ್ನೆಲೆ ಅರ್ಪಿತಾ ಎಂಬವರಿಗೆ ಗರ್ಭಪಾತವಾಗಿತ್ತು ಎನ್ನುವ ಆರೋಪ ಕೇಳಿಬಂದಿದೆ. 6 ಕಾರ್ಮಿಕ ಕುಟುಂಬ 14 ಜನರನ್ನ ಕೊಠಡಿಯಲ್ಲಿ ಕೂಡಿ ಹಾಕಿದ ಆರೋಪ.  

Dalit people were locked up and torched women miscarried in Chikkamagaluru gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ.11): ತೋಟದ ಕೂಲಿ ಕೆಲಸಕ್ಕೆ ಮುಂಗಡ ಹಣ ಪಡೆದು ಕೆಲಸ ಮಾಡುತ್ತಿರುವಾಗಲೇ ಬೇರೆಯವರ ಕಾಫಿತೋಟಕ್ಕೆ ಕೆಲಸಕ್ಕೆ ಹೋಗುತ್ತೇವೆ ಎಂದಿದ್ದಕ್ಕೆ ಕೋಪಗೊಂಡ ಕಾಫಿ ತೋಟದ ಮಾಲೀಕ ಮುಂಗಡ ಹಣವನ್ನು ವಾಪಾಸ್ ನೀಡುವಂತೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರನ್ನೆಲ್ಲ ಗೃಹಬಂಧನದಲ್ಲಿ ಇರಿಸಿರುವುದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು,  ಜಗದೀಶ್‌ಗೌಡ ಎಂಬುವವರ ಕಾಫಿತೋಟದಲ್ಲಿ ಕಾರ್ಮಿಕ ಕುಟುಂಬ ಕೂಲಿ ಲೈನ್‌ನಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದರು. ಈ ಕೂಲಿ ಕಾರ್ಮಿಕರು ಬೇರೆಯವರ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತೇವೆಂದು ತೋಟದ ಮಾಲೀಕರಿಗೆ ತಿಳಿಸಿದ್ದಾರೆ. ನಮ್ಮಿಂದ ಪಡೆದಿರುವ ಮುಂಗಡ ಹಣವನ್ನು ವಾಪಾಸ್ ನೀಡುವಂತೆ ಜಗದೀಶಗೌಡ ಕೇಳಿದ್ದಾರೆ. ಸ್ವಲ್ಪ ಸಮಯ ನೀಡಿ ನಿಮ್ಮಿಂದ ಪಡೆದಿರುವ ಮುಂಗಡ ಹಣವನ್ನು ವಾಪಾಸ್ ನೀಡಿ ಹೋಗುತ್ತೇವೆಂದು ಕೂಲಿ ಕಾರ್ಮಿಕರು ಮನವಿ ಮಾಡಿದ್ದಾರೆ. ಈ ವೇಳೆ ಕೋಪಗೊಂಡ ಮಾಲೀಕ ಜಗದೀಶ್‌ಗೌಡ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದಲ್ಲದೆ ಗೃಹ ಬಂಧನದಲ್ಲಿ ಇರಿಸಿದ್ದರೆಂದು ಕೂಲಿ ಕಾರ್ಮಿಕ ಕುಟುಂಬದವರು ಆರೋಪಿಸಿದ್ದಾರೆ.

ಹಲ್ಲೆಯಿಂದ ನಡೀತಾ ಗರ್ಭಪಾತ..!?
ಕಾಫಿತೋಟದ ಮಾಲೀಕ ದಲಿತ ಕೂಲಿ ಕಾರ್ಮಿಕ ಕುಟುಂಬದವರ ಮೇಲೆ ದೌರ್ಜನ್ಯ ಎಸಗಿದ್ದು, ವಾಗ್ವಾದ ನಡೆಯುತ್ತಿದ್ದಾಗ ಮಗುವೊಂದು ಅಳುತ್ತಿರುವುದನ್ನು ಕೇಳಿಸಿಕೊಳ್ಳದೆ ಮಹಿಳೆಯ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಕೂಲಿ ಕಾರ್ಮಿಕ ಕುಟುಂಬ ಮೊಬೈಲ್‌ನಲ್ಲಿ ಘಟನೆಯನ್ನು ಸೆರೆಹಿಡಿದ್ದಾರೆ.ಮೊಬೈಲ್‌ನಲ್ಲಿ ಘಟನೆಯನ್ನು ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ತೋಟದ ಮಾಲೀಕರು ಅವಾಚ್ಯವಾಗಿ ನಿಂದಿಸಿ ಕೂಲಿ ಕಾರ್ಮಿಕರಿಂದ ಮೊಬೈಲ್‌ಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಮುಂದಾದ ಕವಿತಾ ಮತ್ತು ರೂಪ ಅವರುಗಳ ಕೈಮಾಡದಂತೆ ಬೇಡಿಕೊಂಡರೂ ಅದನ್ನು ಲೆಕ್ಕಿಸದೆ ಅವಾಚ್ಛ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆಂದು ಹೇಳಲಾಗಿದೆ.

ಗರ್ಭಿಣಿ ಮಹಿಳೆ ಅರ್ಪಿತಾ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅರ್ಪಿತಾ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾನೆ. ಹಲ್ಲೆಗೊಳಗಾದ ಅರ್ಪಿತಾ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗರ್ಭಿಣಿ ಅರ್ಪಿತಾ ಅವರ ಮೇಲೆ ಜಗದೀಶ್‌ಗೌಡ ಹಲ್ಲೆ ನಡೆಸಿದ್ದರಿಂದ ಗರ್ಭಪಾತವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದು, ತೋಟದ ಮಾಲೀಕನ ದೌರ್ಜನ್ಯಕ್ಕೆ ಒಳಗಾಗಿರುವ ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದಾರೆ.

ತೋಟದ ಮಾಲೀಕನ ವಿರುದ್ದ ಎಫ್ ಐ ಆರ್ 
ಕೂಲಿ ಕಾರ್ಮಿಕ 6 ಕುಟುಂಬದ 14 ಜನರ ಮೇಲೆ ದರ್ಪ ಮರೆದಿದ್ದು, ಇನ್ನೂ ಅವ್ಯಾಚವಾಗಿ ಬೈದು, ಹಲ್ಲೆ ಮಾಡಿ, ಗರ್ಭಪಾತವಾಗಲು ಕಾರಣವಾಗಿದ್ದ ಹಿನ್ನೆಲೆಯಲ್ಲಿ ಸೆಕ್ಷನ್ 503 , 323,342 ಸೇರಿದಂತೆ ಎಸ್ಸಿ, ಎಸ್ಟಿ ದೌರ್ಜನ್ಯದ ಅಡಿಯಲ್ಲಿ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಜಗದೀಶ್ ಹಾಗೂ ಆತನ ಪುತ್ರ ತಿಲಕ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರೋ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.ಒಟ್ಟಾರೆ, ಜಗದೀಶ್ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ರೋ-ಇಲ್ವೋ ಗೊತ್ತಿಲ್ಲ. ಹಲ್ಲೆಗೊಳಗಾದವರು ಹೊಡೆದರು ಎಂದು ಆರೋಪಿಸಿದ್ದಾರೆ.

ಒಂದು ವೇಳೆ ಜಗದೀಶ್ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದರೆ ನಿಜಕ್ಕೂ ಅಪರಾಧ. ಕಾರ್ಮಿಕರು ಕೆಲಸಕ್ಕೆ ಕಾರ್ಮಿಕರಷ್ಟೇ ಮಾಲೀಕರಿಗಲ್ಲ. ಹಾಗಾಗಿ ಪ್ರಕರಣ ದಾಖಲಿಸಿಕೊಂಡಿರೋ ಬಾಳೆಹೊನ್ನೂರು ಪೊಲೀಸರ ನಿಷ್ಪಕ್ಷಪಾತವಾದ ತನಿಕೆಯಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕಿದೆ. ಪೊಲೀಸರು ಯಾವ ರೀತಿ ತನಿಖೆ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..

Latest Videos
Follow Us:
Download App:
  • android
  • ios