ಹುಬ್ಬಳ್ಳಿ(ಮೇ.15): ಕೊರೋನಾದ ಸಂಕಷ್ಟದ ಈ ವೇಳೆಯೂ ಸೈಬರ್‌ ಖದೀಮರು ಕಳ್ಳಾಟ ಮುಂದುವರಿಸಿದ್ದು, ಸಿಮ್‌ಕಾರ್ಡ್‌ ವೆರಿಫಿಕೇಶನ್‌ಗೆಂದು ಬ್ಯಾಂಕ್‌ ಖಾತೆಗಳ ಗೌಪ್ಯ ಮಾಹಿತಿ ಪಡೆದು ಬರೋಬ್ಬರಿ 5.20 ಲಕ್ಷ ರು. ಗಳನ್ನು ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ಗೆ ಬಳಕೆ ಮಾಡಿಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಾಜಿ ನಗರದ ಬಿಕಾಶಚಂದ್ರ ಮಂಡಳ ಹಾಗೂ ಅವರ ಪತ್ನಿ ವಂಚನೆಗೆ ಒಳಗಾಗಿದ್ದಾರೆ. ಇವರ ಮೊಬೈಲ್‌ಗೆ ಕಳೆದ ಮೇ 12ರಂದು ನಿಮ್ಮ ಸಿಮ್‌ ವೆರಿಫಿಕೇಶನ್‌ ಬಾಕಿ ಇದೆ. ತಕ್ಷಣ ಕಸ್ಟಮರ್‌ ಕೇರ್‌ 7864031054 ಗೆ ಕರೆ ಮಾಡಿ ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ 24 ಗಂಟೆಯಲ್ಲಿ ನಂಬರ್‌ ಬ್ಲಾಕ್‌ ಮಾಡುವುದಾಗಿ ಅP-121231 ಸಂಖ್ಯೆಯಿಂದ ಬಲ್ಕ್ ಮೆಸೆಜ್‌ ಬಂದಿತ್ತು. ಇದನ್ನು ನಂಬಿ ಕರೆ ಮಾಡಿದಾಗ ಮೊದಲು ಸ್ವಿಚ್‌ ಆಫ್‌ ಬಂದಿದೆ.

ಬ್ಯಾಡಗಿ: ಹಣ ದ್ವಿಗುಣಗೊಳಿಸುವುದಾಗಿ ಲಕ್ಷಾಂತರ ರೂ. ವಂಚನೆ, ಕಂಗಾಲಾದ ಜನತೆ..!

ಬಳಿಕ ಅದೇ ನಂಬರ್‌ನಿಂದ ಕರೆ ಬಂದಿದೆ. ಎನಿಡೆಸ್ಕ್‌ ಎಂಬ ಆಪ್‌ ಡೌನ್‌ಲೌಡ್‌ ಮಾಡಿಸಿ ಪತಿ ಪತ್ನಿಯ ಎಸ್‌ಬಿಐ ಜಂಟಿ ಖಾತೆ ಹಾಗೂ ಇತರೆ ಖಾತೆಗಳ ಗೌಪ್ಯ ಮಾಹಿತಿಯನ್ನು ಅದರಲ್ಲಿನ ಅಪ್ಲಿಕೇಶನ್‌ ಮೂಲಕ ಪಡೆದಿದ್ದಾರೆ. ಬಳಿಕ ಶಿಖಾ ಅವರ ಒಂದು ಖಾತೆಯಿಂದ 5.17 ಲಕ್ಷವನ್ನು ಸೈಬರ್‌ ಕಳ್ಳರೆ ಜಂಟಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಜಂಟಿ ಖಾತೆಯಿಂದ ಶಿಖಾ ಅವರ ಇನ್ನೊಂದು ಎಸ್‌ಬಿಐ ಖಾತೆಗೆ 5.17 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ಬಳಿಕ 50 ಸಾವಿರ ರು. ನಂತೆ ಹತ್ತು ಬಾರಿ ಹಾಗೂ 20 ಸಾವಿರ ರು. ಒಂದು ಬಾರಿ ಬಳಸಿ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ಗೆ ಬಳಸಿ ವಂಚಿಸಲಾಗಿದೆ ಎಂದು ದೂರಲ್ಲಿ ದಾಖಲಾಗಿದೆ. ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.