*  ಪ್ರತ್ಯೇಕ ಮೂರು ದೂರು ದಾಖಲು*  ಸುಷ್ಮಿತಾ ಭಟ್ಟಾಚಾರ್ಯಗೆ 1.18 ಲಕ್ಷ ಟೋಪಿ ಹಾಕಿದ ಸೈಬರ್‌ ಕಳ್ಳರು*  ಸಾಫ್ಟ್‌ವೇರ್‌ ಉದ್ಯೋಗಿ ಶೃತಿ ಸಕ್ಸೇನಾಗೂ 40 ಸಾವಿರ ವಂಚನೆ 

ಬೆಂಗಳೂರು(ನ.04): ಆನ್‌ಲೈನ್‌ನಲ್ಲಿ(Online) ಮನೆ ಬಾಡಿಗೆ ಜಾಹೀರಾತು ನೀಡಿ ವ್ಯವಹರಿಸುವ ಮುನ್ನ ಮನೆ ಮಾಲೀಕರು(House Owners) ಎಚ್ಚರಿಕೆ ವಹಿಸುವುದು ಒಳಿತು. ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಮಾಲೀಕರಿಗೆ ಟೋಪಿ ಹಾಕಿ ಸೈಬರ್‌ ವಂಚಕರು ಹಣ ದೋಚಿರುವ ಪ್ರತ್ಯೇಕ ಮೂರು ಪ್ರಕರಣಗಳು ವರದಿಯಾಗಿವೆ.

ಸಿಗೇಹಳ್ಳಿಯ ಅಜಯ್‌ ಕುಮಾರ್‌ ಜೈನ್‌, ಶೃತಿ ಸಕ್ಸೇನಾ ಹಾಗೂ ಯಲಹಂಕ ಉಪನಗರದ ಸುಷ್ಮಿತಾ ಭಟ್ಟಾಚಾರ್ಯ ಎಂಬುವರೇ ವಂಚನೆಗೊಳಗಾಗಿದ್ದು, ಈ ಬಗ್ಗೆ ವೈಟ್‌ ಫೀಲ್ಡ್‌ ಮತ್ತು ಈಶಾನ್ಯ ವಿಭಾಗದ ಸಿಇಎನ್‌ ಪೊಲೀಸ್‌(Police) ಠಾಣೆಗಳಲ್ಲಿ ಪ್ರತ್ಯೇಕವಾಗಿ ದೂರು(Complaint) ದಾಖಲಾಗಿವೆ. ಮೊಬೈಲ್‌ ಕರೆಗಳು(Mobile Call) ಹಾಗೂ ಬ್ಯಾಂಕ್‌ ಖಾತೆ ವರ್ಗಾವಣೆ(Bank Account Transfer) ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ(Investigation) ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ ಹ್ಯಾಕ್‌ಗೆ ಬರೋಬ್ಬರಿ 304 ಸಿಮ್‌ ಬಳಕೆ..!

2 ಕಳುಹಿಸಿ 29 ಸಾವಿರ ಟೋಪಿ:

ಮನೆ ಬಾಡಿಗೆ(Rent) ಇರುವುದಾಗಿ ವೆಬ್‌ಸೈಟ್‌ನಲ್ಲಿ(Website) ಸಿಗೇಹಳ್ಳಿಯ ಅಜಯ್‌ ಕುಮಾರ್‌ ಜೈನ್‌ ಜಾಹೀರಾತು(Advertisement) ಪ್ರಕಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಮೀಳ್‌ ಕುಮಾರ್‌ ಎಂಬುವರು, ತಾವು ಬಾಡಿಗೆ ಬರುವುದಾಗಿ ತಿಳಿಸಿ ಮುಂಗಡ ಹಣ ಪಾವತಿಗೆ ಗೂಗಲ್‌ ಪೇ(Google Pay) ವ್ಯಾಲೆಟ್‌ನಿಂದ 1 ರು. ಹಣ ಕಳುಹಿಸಿ ಎಂದಿದ್ದಾನೆ. ಈ ಮಾತು ನಂಬಿದ ಅವರು, ಆರೋಪಿಗೆ ಗೂಗಲ್‌ ಪೇನಲ್ಲಿ ಹಣ ಕಳುಹಿಸಿದ್ದಾರೆ. ಆಗ ಪ್ರತಿಯಾಗಿ ಜೈನ್‌ ಅವರ ಖಾತೆಗೆ .2 ಮರು ಪಾವತಿಯಾಗಿದೆ. ಆಗ ಮತ್ತೆ ಜೈನ್‌ ಅವರಿಗೆ ಕರೆ ಮಾಡಿದ ಆರೋಪಿ, ನೀವು ನನಗೆ 29 ಸಾವಿರ ವರ್ಗಾಯಿಸಿದರೆ ಕೆಲವೇ ಕ್ಷಣಗಳಲ್ಲಿ ಮುಂಗಡ ಹಣದ ಸಮೇತ ನಿಮ್ಮ ಹಣ ಮರಳಿಸುತ್ತೇನೆ ಎಂದಿದ್ದಾನೆ. ಈ ನಾಜೂಕಿನ ಮಾತು ನಂಬಿದ ಜೈನ್‌ ಅವರು, 29,000 ವರ್ಗಾಯಿಸಿದ್ದಾರೆ. ಇದಾದ ಬಳಿಕ ಆರೋಪಿ ಸಂಪರ್ಕ ಕಡಿತವಾಗಿದೆ. ಕೊನೆಗೆ ತಾವು ವಂಚನೆಗೊಳಗಾಗಿರುವುದು(Fraud) ಜೈನ್‌ ಅವರಿಗೆ ಅರಿವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ ಶೃತಿ ಸಕ್ಸೇನಾ ಅವರಿಗೆ 40 ಸಾವಿರ ವಂಚನೆಯಾಗಿದೆ. ಅಮಿತ್‌ ಕುಮಾರ್‌ ಎಂಬಾತನೇ ವಂಚಿಸಿದ್ದಾನೆ. ಇತ್ತೀಚಿಗೆ ತಮ್ಮ ಮನೆ ಬಾಡಿಗೆ ಇರುವುದಾಗಿ ಹೌಸಿಂಗ್‌.ಕಾಂನಲ್ಲಿ(Housing.com) ಶೃತಿ ಪ್ರಕಟಿಸಿದ್ದರು. ಆಗ ಅವರಿಗೆ ಕರೆ ಮಾಡಿದ ಆರೋಪಿ(Accused), ಸೇನೆಯಲ್ಲಿ(Army) ಕೆಲಸ ಮಾಡುವುದಾಗಿ ಹೇಳಿ ಪರಿಚಯಸಿಕೊಂಡಿದ್ದ. ನಿಮ್ಮ ಮನೆ ನನಗೆ ಒಪ್ಪಿಗೆಯಾಗಿದೆ. ಮುಂಗಡವಾಗಿ 10 ಸಾವಿರ ಹಣವನ್ನು ಆನ್‌ಲೈನ್‌ ಮೂಲಕ ಪಾವತಿಸುವುದಾಗಿ ನಂಬಿಸಿ ಶೃತಿ ಅವರ ಬ್ಯಾಂಕ್‌ ಖಾತೆ ಮಾಹಿತಿ ಪಡೆದ ಆತ, ಹಣ ವರ್ಗಾವಣೆ ಸಂಬಂಧ ಮೊಬೈಲ್‌ಗೆ ಬರುವ ಪಿನ್‌ ನಂಬರ್‌ ಹೇಳುವಂತೆ ಸೂಚಿಸಿದ್ದ. ಬಳಿಕ ಒಟಿಪಿ ಸಂಖ್ಯೆ ಪಡೆದು ಶೃತಿ ಅವರ ಖಾತೆಯಿಂದಲೇ 10 ಸಾವಿರ ಎಗರಿಸಿದ್ದಾನೆ. ಇದಕ್ಕೆ ಶೃತಿ ಆಕ್ಷೇಪಿಸಿದಾಗ ಕ್ಯೂಆರ್‌ ಕೋಡ್‌(QR Code) ಕಳುಹಿಸಿ ಸ್ಕ್ಯಾನ್‌ ಮಾಡುವಂತೆ ಸಲಹೆ ನೀಡಿದ್ದ. ಸ್ಕ್ಯಾನ್‌ ಮಾಡಿದಾಗ ಮತ್ತೆ 30 ಸಾವಿರ ಕಡಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1.18 ಲಕ್ಷ ಟೋಪಿ

ಯಲಹಂಕ ನ್ಯೂಟೌನ್‌ನ ಸುಷ್ಮಿತಾ ಭಟ್ಟಾಚಾರ್ಯ ಅವರಿಗೆ ಸೈಬರ್‌ ಕಳ್ಳರು 1.18 ಲಕ್ಷ ಟೋಪಿ ಹಾಕಿದ್ದಾರೆ. ತಮ್ಮ ತಂದೆ ಹೆಸರಿನಲ್ಲಿದ್ದ ಮನೆಯನ್ನು ಬಾಡಿಗೆಗೆ ಇರುವುದಾಗಿ ವೆಬ್‌ಸೈಟ್‌ನಲ್ಲಿ ಸುಷ್ಮಿತಾ ಜಾಹೀರಾತು ಪ್ರಕಟಿಸಿದ್ದರು. ಆಗ ಬಾಡಿಗೆ ನೆಪದಲ್ಲಿ ಕರೆ ಮಾಡಿ ಕಿಡಿಗೇಡಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.