ಬೆಂಗಳೂರು (ಫೆ.28):  ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಅವರ ಇ-ಮೇಲ್‌ ಐಡಿಯನ್ನು ಹ್ಯಾಕ್‌ ಮಾಡಿದ ಕಿಡಿಗೇಡಿಗಳು, ಬಿದರಿ ಅವರ ಹೆಸರಿನಲ್ಲಿ ಸ್ನೇಹಿತರಿಗೆ ಮೇಲ್‌ ಕಳುಹಿಸಿ 25 ಸಾವಿರ ವಸೂಲಿ ಮಾಡಿರುವ ಘಟನೆ ನಡೆದಿದೆ.

ಎರಡು ದಿನಗಳ ಹಿಂದ ಈ ಕೃತ್ಯ ನಡೆದಿದ್ದು, ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಬಿದರಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

‘ನನ್ನ ಇ-ಮೇಲ್‌ ಐಡಿಯನ್ನು ಅಪರಿಚಿತರು ಹ್ಯಾಕ್‌ ಮಾಡಿದ್ದಲ್ಲದೆ ಇ-ಮೇಲ್‌ನಲ್ಲಿರುವ ಸ್ನೇಹಿತರಿಗೆ ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಐಎಫ್‌ಎಸ್‌ಸಿ ಕೋಡ್‌ ಕಳುಹಿಸಿದ್ದರು. ಬಳಿಕ ಸದರಿ ಖಾತೆಗೆ ಹಣವನ್ನು ಜಮಾವಣೆ ಮಾಡುವಂತೆ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನನ್ನ ಸ್ನೇಹಿತರೊಬ್ಬರು ನಾನೇ ಸಂದೇಶ ಕಳುಹಿಸಿದ್ದೇನೆ ಎಂದು ಭಾವಿಸಿ 25 ಸಾವಿರವನ್ನು ಪಾವತಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಶಂಕರ ಬಿದರಿ ದೂರಿನಲ್ಲಿ ತಿಳಿಸಿದ್ದಾರೆ.