Bengaluru Crime News: ಬೆಂಗಳೂರು ಮೂಲದ ಕಿರಣ್ ಕಳೆದ ತಮ್ಮ ಗೆಳತಿ ಜೊತೆಗೆ ದೇವನಹಳ್ಳಿ ಕಡೆಗೆ ಲಾಂಗ್ ಡ್ರೈವ್ ಹೋಗಿ, ಸಿಟಿ ಕಡೆಗೆ ಬರುವ ವೇಳೆ ಬೈಪಾಸ್ ಬಳಿ ಮೂವರು ದುಷ್ಕರ್ಮಿಗಳ ತಂಡ ಬೈಕ್ ಅಡ್ಡಗಟ್ಟಿ ದರೋಡೆಗೆ ಮುಂದಾಗಿತ್ತು. 

ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು (ಜು. 15): ಲೇಟ್ ನೈಟ್ ಲಾಂಗ್ ಡ್ರೈವ್ ಹೋಗ್ತಿದ್ದೀರಾ? ಹಾಗದ್ರೆ ಹುಷಾರಾಗಿರಿ. ಲಾಂಗ್ ಡ್ರೈವ್ (Long Drive) ಬರೋ ಯುವಕ- ಯುವತಿರಿಗಾಗಿಯೇ ಅಲ್ಲೊಂದು ಪುಂಡರ ಗ್ಯಾಂಗ್ ರೆಡಿಯಾಗಿ ಕಾಯ್ತಾ ಇರುತ್ತೆ. ಬಂದಿದ್ದೆ ತಡ ರಾಬ್ರಿ ಮಾಡುತ್ತೆ. ಇಂತಹ ಒಂದು ಘಟನೆ ನಗರದ ಬೆಂಗಳೂರು (Bengaluru) ಹೊರವಲಯದ ದೇವನಹಳ್ಳಿಯಲ್ಲಿ ನಡೆದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲ ವರ್ಷಗಳಿಂದ ಇದೊಂದು ಟ್ರೆಂಡ್ ಆಗಿಬಿಟ್ಟಿದೆ. 

ಹುಡುಗ-ಹುಡುಗಿಯರು, ರಾತ್ರಿ ಹತ್ತು ಗಂಟೆ ನಂತರ ಸಿಟಿಯಿಂದ ಹೊರಗಡೆ ಒಂದು ಲಾಂಗ್ ಡ್ರೈವ್ ಹೋಗಿ ಅಲ್ಲೋಂದು ಹೋಟೆಲ್ ನಲ್ಲಿ ಊಟ ಮಾಡ್ಕೊಂಡು ತಡರಾತ್ರಿವರೆಗೂ ತಿರುಗಾಡಿಕೊಂಡು ಬರೋದು. ಬಹುತೇಕರು ಹೊರವಲಯದ ನೈಸ್ ರಸ್ತೆ, ಏರ್ಪೋರ್ಟ್ ರಸ್ತೆ (Airport Road), ತುಮಕೂರು ರಸ್ತೆ , ಎಲೆಕ್ಟ್ರಾನಿಕ್ ಸಿಟಿ ಹೀಗೆ ನಗರದ ಹೊರವಲಯದ ರಸ್ತೆ ಗಳಲ್ಲಿ ಲಾಂಗ್ ಡ್ರೈವ್ ಮಾಡ್ತಾರೆ.

ಇಂತಹ ಪ್ರೇಮಿಗಳಾಗಿಯೇ ಕಾದು ಕುಳಿತಿರೋ ಪುಂಡರ ಗ್ಯಾಂಗ್ ಅಂತವರನ್ನು ಅಡ್ಡಗಟ್ಟಿ ಹಣ, ಒಡವೆ, ಮೊಬೈಲ್, ಪರ್ಸ್ ಏನೇ ಸಿಕ್ಕರೂ ಕಸಿದು ಎಸ್ಕೇಪ್ ಆಗ್ತಾರೆ. ಚೂರು ವಿರೋಧ ಮಾಡಿದ್ರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡ್ತಾರೆ. 

ಪ್ರೇಮಿಗಳ ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಸುಲಿಗೆ: ಬೆಂಗಳೂರು ಮೂಲದ ಕಿರಣ್ ಕಳೆದ 9ರ ರಾತ್ರಿ ತನ್ನ ಗೆಳತಿ ಜೊತೆಗೆ ದೇವನಹಳ್ಳಿ ಕಡೆಗೆ ಲಾಂಗ್ ಡ್ರೈವ್ ಹೋಗಿದ್ರು. ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್ ನಲ್ಲಿ ಊಟ ಮಾಡಿಕೊಂಡು ಸಿಟಿ ಕಡೆಗೆ ಬರುವ ವೇಳೆ ಅಲ್ಲಿನ ಬೈಪಾಸ್ ಬಳಿ ಮೂವರು ದುಷ್ಕರ್ಮಿಗಳ ತಂಡ ಬೈಕ್ ಅಡ್ಡಗಟ್ಟಿತ್ತು.

ಇದನ್ನೂ ಓದಿ:ಜ್ಯೋತಿಷಿ ಪ್ರಮೋದ್‌ ದರೋಡೆ: ಆಪ್ತ ಸಹಾಯಕಿ ಮೇಘನಾಳೇ ಮಾಸ್ಟರ್‌ಮೈಂಡ್!

ಹತ್ತಿರದ ಬಂದವರೇ ಏಕಾಏಕಿ ಕಿರಣ್ ಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ರು. ನಂತರ ಕಿರಣ್ ಬಳಿಯಿದ್ದ ಚಿನ್ನದ ಸರ ಕಸಿದುಕೊಂಡಿದ್ರು. ನಂತರ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ರು. ಹಣ ಇಲ್ಲ ಅಂದಾಗ ಜೊತೆಯಲ್ಲಿದ್ದ ಯುವತಿಯನ್ನು ಒತ್ತೆಯಾಳಾಗಿ‌ ಇಟ್ಕೊಂಡು, ಎಟಿಎಂ ಗೆ ಹೋಗಿ ಹಣ ತರಬೇಕು, ಇಲ್ಲವಾದ್ರೆ ಇವಳನ್ನು ಇಲ್ಲೇ ಮುಗಿಸಿಬಿಡ್ತಿವಿ ಎಂದು ಬೆದರಿಸಿದ್ರು.

ಭಯಗೊಂಡ ಯುವಕ ಹತ್ತಿರದ ಎಟಿಎಂಗೆ ಹೋಗಿ ಅಕೌಂಟ್ ನಲ್ಲಿದ್ದ ಹದಿನೈದು ಸಾವಿರ ಹಣ ಡ್ರಾ ಮಾಡಿ ತಂದು ಆ ಟೀಂ ಕೈಗೆ ಕೊಟ್ಟು ಪರಾಗಿ ಬಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೇವನಹಳ್ಳಿ ಪೊಲೀಸರು, ಆರೋಪಿಗಳಾದ ಸುಬ್ರಹ್ಮಣ್ಯ, ಅನಿಲ್ ಕುಮಾರ, ಪ್ರವೀಣ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ. ಸದ್ಯ ಈ ಮೂವರು ಆರೋಪಿಗಳ ವಿಚಾರಣೆ ವೇಳೆ‌ ಮತ್ತಷ್ಟು ಇದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ .