* ಬೆಂಗಳೂರು ಸಾರಿಗೆ ಇಲಾಖೆ ಕಚೇರಿಗಳಲ್ಲಿ ನಡೆದಿದೆ ಬೃಹತ್ ಕರ್ಮಕಾಂಡ..!* ರೋಡ್ ಟ್ಯಾಕ್ಸ್ ಕಟ್ಟಿಸಿಕೊಳ್ಳದೆ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ವಂಚನೆ* ಸರ್ಕಾರಕ್ಕೆ ವರದಿ ಸಲ್ಲಿಸಿದ ಸಾರಿಗೆ ಇಲಾಖೆ

ವರದಿ; ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು5);
ಆರ್‌ಟಿಓ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿ ಕುಳಿತಿರೋ ಅಧಿಕಾರಿಗಳು ಮಾಡಿರೋದು ಮಾತ್ರ ಇಲಾಖೆಗೆ ದ್ರೋಹದ ಕೆಲಸ. ಯೆಸ್ ಅಕ್ರಮವನ್ನ ತಡೆಯಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ಸರ್ಕಾರದ ಖಜಾನೆಗೆ ಖನ್ನ ಹಾಕಿದ್ದಾರೆ. ನಿಯಮ ಬಾಹಿರವಾಗಿ ನೂರಾರು ದುಬಾರಿ ವಾಹನಗಳನ್ನ ಅಕ್ರಮ ನೋಂದಾಣಿ ಮಾಡಿ ಕೋಟಿ ಕೋಟಿ ವಂಚನೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರವೆಸಗಿದ್ದಾರೆ. 

ಅಕ್ರಮಗಳ ಕೊಂಪೆಯಾಗಿರುವ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಬೃಹತ್ ಗೋಲ್ಮಾಲ್ ಬಯಲಾಗಿದೆ. ಐಷಾರಾಮಿ ಕಾರುಗಳುನ್ನ ಅಕ್ರಮ ನೋಂದಾಣಿ ಮಾಡೋ ಮೂಲಕ ಸರ್ಕಾರದ ಬೊಕ್ಕಸಕ್ಕೆ 100ಕ್ಕೂ ಅಧಿಕ ಕೋಟಿ ರಸ್ತೆ ತೆರಿಗೆ ವಂಚಿಸಿರೋದು ತನಿಖೆಯಿಂದ ಬಯಲಾಗಿದೆ. 20 ಲಕ್ಷಕ್ಕಿಂತ ಅಧಿಕ ಬೆಲೆಯ ಕಾರುಗಳ ನೋಂದಣಿ ಹಾಗೂ ತೆರಿಗೆ ಪಾವತಿ ಬಗ್ಗೆ ತ‌ನಿಖೆ ನಡೆಸಲು ರಚಿಸಿದ್ದ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ಸಾರಿಗೆ ಇಲಾಖೆಗೆ ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಅಕ್ರಮ ನೋಂದಾಣಿ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ತನಿಖೆಯಲ್ಲಿ ಸಾಕ್ಷಿ ಸಮೇತ ಸಾಬೀತಾಗಿದೆ. ಸದ್ಯ 700 ವಾಹನಗಳನ್ನ ಪರಿಶೀಲನೆ ಮಾಡಿದ್ದಾಗ 120 ಐಷಾರಾಮಿ ಕಾರುಗಳನ್ನ ಟ್ಯಾಕ್ಸ್ ಕಟ್ಟಿಸಿಕೊಳ್ಳದೆ ಬೆಂಗಳೂರಿನ ಕೋರಮಂಗಲ, ಜಯನಗರ ಹಾಗೂ ಕಸ್ತೂರಿನಗರ ಆರ್ ಟಿ ಓ ಕಚೇರಿಗಳಲ್ಲಿ ಅಧಿಕಾರಿಗಳು ನೋಂದಾಣಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ ಪೇ And ಪಾರ್ಕ್.. ವಾಹನ ಸವಾರರಿಗೆ ಶಾಕ್ ..!

ತೆರಿಗೆ ವಂಚನೆ ಪಟ್ಟಿಯಲ್ಲಿರುವ ಕಾರುಗಳೆಲ್ಲಾ ರಾಜಕಾರಣಿಗಳು,ಉದ್ಯಮಿಗಳು, ಬಿಲ್ಡರ್, ಗಳು ಹಾಗೂ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳ ಹೆಸರಿನಲ್ಲಿ ನೋಂದಣಿಯಾಗಿವೆ. ತೆರಿಗೆ ಪಾವತಿಸಿರುವುದಕ್ಕೆ ಯಾವದೇ ದಾಖಲಾತಿ ಇಲ್ಲ. ಹೀಗಾಗಿ ವಾಹನ ಕಳೆದುಕೊಳ್ಳುವ ಜೊತೆಗೆ ವಿಚಾರಣೆ ಎದುರಿಸುವ ಸಂಕಷ್ಟ ಮಾಲೀಕರಿಗೆ ಇದೆ. ಕರ್ನಾಟಕ ರಸ್ತೆ ತೆರಿಗೆ ಶೇ ,20 ಇದೆ. ಅಂದರೆ 1 ಕೋಟಿ ಮೌಲ್ಯ ದ ಕಾರು ಖರೀದಿಸಿದರೆ 20 ಲಕ್ಷ ರೂ ರಸ್ತೆ ತೆರಿಗೆ ಪಾವತಿ ಮಾಡಬೇಕು. 50 ಲಕ್ಷ ವಾಹನ ಖರೀದಿಗೆ 10 ಲಕ್ಷ ತೆರಗೆ ಕಟ್ಟಬೇಕು.

ಆದ್ರೆ ದುಬಾರಿ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೆ ಕಳ್ಳದಾರಿಯಲ್ಲಿ ನೋಂದಣಿ ಮಾಡಿಕೊಡಲಾಗಿದೆ. ಸರ್ಕಾರಕ್ಕೆ ಸೇರಬೇಕಾದ ತೆರಿಗೆ ವೈಯಕ್ತಿಕ ಲಾಭಮಾಡಿಕೊಳ್ಳಲಾಗಿದೆ. ಇಲ್ಲಿ ದುಬಾರಿ ಕಾರುಗಳನ್ನ ಟಾರ್ಗೆಟ್ ಮಾಡಿಕೊಂಡು ನೋಂದಣಿಯಲ್ಲಿ ಕಳ್ಳಾಟ ನಡೆದಿದೆ. ಆಡಿ,ಜಾಗ್ವಾರ್,ಮಸಿರ್ಡಿಸ್,ಬೆಂಜ್, ಬಿಎಂಡಬ್ಲ್ಯೂ, ಪೋರ್ಶೆ,ಲ್ಯಾಂಬೋಗಿರ್ನಿ,ವೋಲ್ವೋ,ರೇಂಜ್ ರೋವರ್, ಎಂಡೇವೋರ್,ಫಾರ್ಚೂರ್,ಸ್ಕೋಡಾ ವಾಹನಗಳನ್ನ ಅಕ್ರಮವಾಗಿ ನೋಂದಾಣಿ ಮಾಡಲಾಗಿದೆ.2015 ರಿಂದ ಈ ದಂಧೆ ನಡೆದಿದ್ದು,ವಿಚಾರಣೆ ನಡೆಸಿದರೆ ಇನ್ನಷ್ಟು ಅಕ್ರಮ ಬಯಲಾಗುವ ಸಾಧ್ಯತೆ ಇದೆ. 

ಕೂಡಲೇ ವಾಹನಗಳ ಜಪ್ತಿ ಮಾಡಬೇಕು. ಒಂದು ವೇಳೆ ತೆರಿಗೆ ಪಾವತಿಸಿರುವ ಬಗ್ಗೆ ಸೂಕ್ತ ದಾಖಲೆ ಒದಗಿಸಿದರೆ ಪರಿಗಣಿಸಿ ವಾಹನ ಬಿಡಬೇಕು.ತೆರಿಗೆ ಪಾವತಿಸದಿದ್ದರೆ ವಸೂಲಿ ಮಾಡಬೇಕು ಅಂತ ಸಾರಿಗೆ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಸರ್ಕಾರಕ್ಕೆ ನಾಲ್ಕು ತಿಂಗಳ ಹಿಂದೆ ಸಾರಿಗೆ ಕಚೇರಿಯಿಂದ ವರದಿ ನೀಡಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕಿದೆ.