* ಪೊಲೀಸರ ಮೇಲೆ ಕಾರು ಹತ್ತಿಸಲು  ದನಗಳ್ಳರ ಯತ್ನ!* ಗಸ್ತಿನಲ್ಲಿದ್ದ ಪೊಲೀಸರ ಮೇಲೆ ದಾಳಿ* ಪೆರೋಲ್‌ ಮೇಲೆ ಹೊರಬಂದು ನಾಪತ್ತೆಯಾಗಿದ್ದ ಕೈದಿ 14 ವರ್ಷದ ಬಳಿಕ ಬಂಧನ* ಸಾಲ ಕೊಟ್ಟಕಂಪನಿ ಕಿರುಕುಳ ಸಹಿಸದೆ ನಡುರಸ್ತೆಯಲ್ಲಿ ವಾಹನಕ್ಕೆ ಬೆಂಕಿ ಇಟ್ಟ!

ಕಾರ್ಕಳ(ಜ. 31) ರಾತ್ರಿ ವೇಳೆ ಗಸ್ತಿನಲ್ಲಿದ್ದ ಪೊಲೀಸರ (Karnataka Police) ಮೇಲೆ ದನ ಕಳವು (Cow)ಆರೋಪಿಗಳು ಕಾರು ಚಲಾಯಿಸಿರುವ ಘಟನೆ ಉಡುಪಿ (Udupi) ಜಿಲ್ಲೆ ಕಾರ್ಕಳ (Karkala) ತಾಲೂಕಿನ ಮಾಳ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ. ಈ ಸಂದರ್ಭ ಪೊಲೀಸರು ರಸ್ತೆಗೆ ಬಿದ್ದು ತಪ್ಪಿಸಿಕೊಂಡಿದ್ದರಿಂದ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಿಸಿ ಆರೋಪಿ ಮಿಜಾರಿನ ಹಂಡೆಲು ನಿವಾಸಿ ಸಯ್ಯದ್‌ ಜುಹಾದ್‌ (30) ಎಂಬಾತನನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳಾದ ಮೈಯದ್ದಿ, ಸುರೇಶ್‌, ಫಿರೋಜ್‌ ಎಂಬವರು ತಪ್ಪಿಸಿಕೊಂಡಿದ್ದಾರೆ. ಘಟನೆಯಲ್ಲಿ ಕಾರ್ಕಳ ಗ್ರಾಮಾಂತರ ಎಸ್‌ಐ ತೇಜಸ್ವಿ ಹಾಗೂ ಒಬ್ಬ ಪೊಲೀಸ್‌ ಕಾನ್‌ಸ್ಟೇಬಲ್‌ ಗಾಯಗೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಘಟನೆ ವಿವರ: ಭಾನುವಾರ ನಸುಕಿನ ಸಮಯದಲ್ಲಿ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ತನ್ನ ಸಿಬ್ಬಂದಿಯೊಂದಿಗೆ ಮುಡಾರು ಗ್ರಾಮ ಹೆಪೆಜಾರು ಎಂಬಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಬೆಳಗಿನ ಜಾವ 3.50ರ ವೇಳೆಗೆ ಬಜಗೋಳಿ ಕಡೆಯಿಂದ ವೇಗವಾಗಿ ಬಂದ ಬೈಕ್‌ ಮತ್ತು ಕಾರು ಚಾಲಕರು ಬ್ಯಾರಿಕೇಡ್‌ಗಳಿಗೆ ಗುದ್ದಿ ಪೋಲೀಸರ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಹಾರಿ ರಸ್ತೆಗೆ ಬಿದ್ದು ತಪ್ಪಿಸಿಕೊಂಡಿದ್ದಾರೆ.

Cover Story : ಬರೀ ಪೇಪರ್ ನಲ್ಲಿ ಉಳಿದ ಗೋಹತ್ಯೆ ನಿಷೇಧ ಕಾಯ್ದೆ?

ತಕ್ಷಣವೇ ಜೀಪಿನಲ್ಲಿ ಹಿಂಬಾಲಿಸಿಕೊಂಡು ಹೋಗಿರುವ ಪೊಲೀಸರು ಚರಂಡಿಯಲ್ಲಿ ಬಿದ್ದಿದ್ದ ಸಯ್ಯದ್‌ ಜುಹಾದ್‌ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು.

ಪೆರೋಲ್‌ ಮೇಲೆ ಹೊರಬಂದು ನಾಪತ್ತೆಯಾಗಿದ್ದ ಕೈದಿ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಮೂಲದ ಕರುಣಾಕರ್‌(48) ಬಂಧಿತ. ಕರುಣಾಕರ್‌ 1998ರಲ್ಲಿ ಬ್ಯಾಟರಾಯನಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಜೀವ್‌ ಎಂಬಾತನ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. 2008ರಲ್ಲಿ ತಾಯಿಯ ಅನಾರೋಗ್ಯ ಸಮಸ್ಯೆ ಕಾರಣ ನೀಡಿ ಪೆರೋಲ್‌ ಪಡೆದು ಜೈಲಿನಿಂದ ಹೊರಬಂದಿದ್ದ ಕರುಣಾಕರ್‌ ಪೆರೋಲ್‌ ಅವಧಿ ಮುಗಿದರೂ ಜೈಲಿಗೆ ವಾಪಸಾಗದೆ ತಲೆಮರೆಸಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಡಿವಾಳ ಠಾಣೆ ಪೊಲೀಸರು ಅಪರಾಧಿಯ ಬಂಧನಕ್ಕೆ ಬಲೆ ಬೀಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧಿ ಕರುಣಾಕರ್‌ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಹಾನಗಲ್‌ಗೆ ತೆರಳಿ ಆತನನ್ನು ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ. ಕರುಣಾಕರ್‌ ಪೆರೋಲ್‌ ಮೇಲೆ ಹೊರಬಂದ ಬಳಿಕ ಊರಿಗೂ ಹೋಗಿರಲಿಲ್ಲ. ಹಾನಗಲ್‌ನಲ್ಲಿ ಸಣ್ಣ ಹೋಟೆಲ್‌ ಪ್ರಾರಂಭಿಸಿ ಜೀವನ ನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಲ (Loan) ಕೊಟ್ಟಕಂಪನಿ ಕಿರುಕುಳ ಸಹಿಸದೆನ ನಡುರಸ್ತೆಯಲ್ಲಿ ವಾಹನಕ್ಕೆ ಬೆಂಕಿ ಇಟ್ಟ!: ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಸಾಲ ಮಾಡಿ ಕ್ರೂಸರ್‌ ವಾಹನ ಖರೀದಿಸಿದ್ದ ವ್ಯಕ್ತಿಯೊಬ್ಬ ಹಣಕಾಸು ಸಂಸ್ಥೆಯವರ ಕಾಟಕ್ಕೆ ಬೇಸತ್ತು ಕ್ರೂಸರ್‌ಗೆ ಬೆಂಕಿ ಇಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಗರದ ಬಸ್‌ ನಿಲ್ದಾಣದ ಮುಂಭಾಗದ ನಡುರಸ್ತೆಯಲ್ಲಿ ಜರುಗಿದೆ. 

ಗುಳೇದಗುಡ್ಡದ ಸುಭಾಷ್‌ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದವರು. ವಾಹನದ ಮೇಲೆ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಸಾಲ ಇತ್ತು. ಸರಿಯಾಗಿ ಸಾಲ ಕಟ್ಟಿಲ್ಲ ಎಂಬ ಕಾರಣ ನೀಡಿ ವಾಹನವನ್ನು ಆ ಕಂಪನಿ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು ಎನ್ನಲಾಗಿದೆ. ಅಲ್ಲದೆ ಸಾಲದ ಕಂತು ಕಟ್ಟಿಎಂದು ಪದೇಪದೇ ಫೈನಾನ್ಸ್‌ನವರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಸುಭಾಷ್‌ ನಡುರಸ್ತೆಯಲ್ಲಿ ಕ್ರೂಸರ್‌ಗೆ ಬೆಂಕಿ ಹಚ್ಚಿದ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಧಗಧಗ ಉರಿಯುವ ವಾಹನ ಕಂಡು ಸ್ಥಳೀಯರು ಬೆಚ್ಚಿಬಿದ್ದರು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ತಹಸೀಲ್ದಾರ್‌ ಜೀಪ್‌ ಚಾಲಕ ಆತ್ಮಹತ್ಯೆ ಕೇಸು, ಮೂವರ ಸೆರೆ: ಲಂಚ ಪಡೆವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ಶೃಂಗೇರಿ ತಹಸೀಲ್ದಾರ್‌ ಅವರ ಜೀಪ್‌ ಚಾಲಕರಾಗಿದ್ದ ವಿಜೇತ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಶರತ್‌ ಹಾಗೂ ಸಾರ್ವಜನಿಕರಾದ ರಾಘವೇಂದ್ರ ಮತ್ತು ನಾಗೇಂದ್ರ ಬಂಧಿತರು. ತಹಶೀಲ್ದಾರ್‌ ಜೀಪ್‌ ಚಾಲಕ ವಿಜೇತ್‌ (26) ಶನಿವಾರ ಸಂಜೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಡೆತ್‌ ನೋಟಲ್ಲಿ ಈ ಮೂಲರ ಹೆಸರನ್ನು ಉಲ್ಲೇಖಿಸಿದ್ದರು.