ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಆರೋಗ್ಯದ ಮೇಲೆ ನಿಗಾವಹಿಸಿದ ವೈದ್ಯರು 

ಬೆಂಗಳೂರು/ಮಂಗಳೂರು(ಡಿ.18):  ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ನನ್ನು ಬೆಂಗಳೂರಿಗೆ ಕರೆತರಲಾಗಿದೆ. ಚಿಕಿತ್ಸೆ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಈತನನ್ನು ದಾಖಲಿಸಿದ್ದು, ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. 

ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಆರೋಗ್ಯದ ಮೇಲೆ ವೈದ್ಯರು ನಿಗಾವಹಿಸಿದ್ದಾರೆ. ನ.19 ರಂದು ಮಂಗಳೂರಿನಲ್ಲಿ ಚಲಿಸುವ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಬಾಂಬ್‌ ತೆಗೆದುಕೊಂಡು ಹೋಗುತ್ತಿದ್ದ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಹಾಗೂ ಆಟೋ ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯ ಎನ್ನಿಸಿದ ಕಾರಣ ಶಾರೀಕ್‌ನನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Mangalore Blast: ಪೆನ್‌ ಡ್ರೈವ್‌ ಬಿಚ್ಚಿಡ್ತು 'ಸ್ಫೋಟ'ಕ ಸತ್ಯ: ಇದು ಶಾರಿಕ್‌ 'ಬಾಂಬ್‌' ಬ್ಲಾಸ್ಟ್‌ ಕಹಾನಿ

ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಂಭೀರ ಗಾಯಗೊಂಡ ಈತನನ್ನು ಮಂಗಳೂರು ಆಸ್ಪತ್ರೆಯಲ್ಲೇ ವಿಚಾರಣೆ ನಡೆಸಲು ವೈದ್ಯರು ಅನುಮತಿ ನೀಡಿರಲಿಲ್ಲ. ಈ ನಡುವೆ ಮಂಗಳೂರು ಪೊಲೀಸರು ದಕ್ಷಿಣ ಕನ್ನಡ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳಿ ತನಿಖೆ ಆರಂಭಿಸಿದ್ದರು. ಎನ್‌ಐಎ ಕೂಡ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಒಂದು ತಿಂಗಳ ಚಿಕಿತ್ಸೆ ಬಳಿಕ ಶಾರೀಕ್‌ ಶೇ.75ರಷ್ಟು ಚೇತರಿಕೆ ಕಂಡಿದ್ದ. ಹೀಗಾಗಿ ಎನ್‌ಐಎ ತಂಡ ಆಸ್ಪತ್ರೆಗೆ ಆಗಮಿಸಿ ತನಿಖೆ ಆರಂಭಿಸಿತ್ತು. ಈ ವೇಳೆ ಅಧಿಕಾರಿಗಳ ಪ್ರಶ್ನೆಗೆ ಶಂಕಿತ ಉಗ್ರ ಸಮರ್ಪಕ ಉತ್ತರ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದೀಗ ಆತನನ್ನು ಎನ್‌ಐಎ ತಂಡ ನೇರವಾಗಿ ಬೆಂಗಳೂರಿಗೆ ಕರೆತಂದಿದ್ದು, ಆರೋಗ್ಯದಲ್ಲಿ ಮತ್ತಷ್ಟುಚೇತರಿಕೆ ಕಂಡು ಬಂದ ಬಳಿಕ ವಿಚಾರಣೆಗೆ ಒಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.