Asianet Suvarna News Asianet Suvarna News

Murder Plan: ಶಾಸಕ ವಿಶ್ವನಾಥ್ ಹತ್ಯೆ ಸಂಚು ಪ್ರಕರಣ; ಒಬ್ಬ ಸೆರೆ

ಸ್ಥಳೀಯ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಕೊಲೆ ಸಂಚಿನ ಪ್ರಕರಣದ ಮರು ತನಿಖೆಯನ್ನು ರಾಜಾನಕುಂಟೆ ಠಾಣೆ ಪೊಲೀಸರು ಆರಂಭಿಸಿದ್ದು, ಈ ಸಂಬಂಧ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Conspiracy to kill MLA Vishwanath case arrested one accused rav
Author
First Published Dec 6, 2022, 6:26 AM IST

ಬೆಂಗಳೂರು (ಡಿ.6) : ಸ್ಥಳೀಯ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಕೊಲೆ ಸಂಚಿನ ಪ್ರಕರಣದ ಮರು ತನಿಖೆಯನ್ನು ರಾಜಾನಕುಂಟೆ ಠಾಣೆ ಪೊಲೀಸರು ಆರಂಭಿಸಿದ್ದು, ಈ ಸಂಬಂಧ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಸಮೀಪದ ಅಟ್ಟೂರು ನಿವಾಸಿ ದೇವರಾಜ್‌ ಅಲಿಯಾಸ್‌ ಕುಳ್ಳ ದೇವರಾಜ್‌ ಬಂಧಿತನಾಗಿದ್ದು, ತಪ್ಪಿಸಿಕೊಂಡಿರುವ ಯಲಹಂಕ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಮುತ್ತುಗದಹಳ್ಳಿ ಗೋಪಾಲಕೃಷ್ಣ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತಮ್ಮ ಕೊಲೆ ಸಂಚಿನ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿ ನಗರದ 2ನೇ ಎಸಿಜೆಎಂ ನ್ಯಾಯಾಲಯಕ್ಕೆ ಶಾಸಕ ವಿಶ್ವನಾಥ್‌ ಖಾಸಗಿ ದೂರು ದಾಖಲಿಸಿದ್ದರು. ಈ ದೂರು ಸ್ವೀಕರಿಸಿದ ನ್ಯಾಯಾಲಯವು, ಪ್ರಕರಣದ ತನಿಖೆ ನಡೆಸುವಂತೆ ರಾಜಾನುಕುಂಟೆ ಪೊಲೀಸರಿಗೆ ಆದೇಶಿಸಿದೆ.

Murder Plan: ತಮ್ಮ ಹತ್ಯೆಗೆ ಕಾಂಗ್ರೆಸ್ ನಾಯಕ ಸ್ಕೆಚ್, ಮಹತ್ವದ ಮಾಹಿತಿ ಬಿಚ್ಚಿಟ್ಟ ಶಾಸಕ ವಿಶ್ವನಾಥ್

ಅದರನ್ವಯ ಮತ್ತೆ ಹಳೇ ಪ್ರಕರಣಕ್ಕೆ ಹೊಸದಾಗಿ ಎಫ್‌ಐಆರ್‌ ದಾಖಲಿಸಿಕೊಂಡ ರಾಜಾನುಕುಂಟೆ ಠಾಣೆ ಪೊಲೀಸರು, ಕೊಲೆ ಸಂಚಿನಲ್ಲಿ ಪಾತ್ರವಹಿಸಿದ ಆರೋಪಕ್ಕೆ ತುತ್ತಾಗಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ದೇವರಾಜ್‌ ಅಲಿಯಾಸ್‌ ಕುಳ್ಳ ದೇವರಾಜ್‌ನನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಏನಿದು ಪ್ರಕರಣ?

ಕಳೆದ ವರ್ಷ ಶಾಸಕ ವಿಶ್ವನಾಥ್‌ ಅವರ ಹತ್ಯೆಗೆ ಸಂಚು ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಶಾಸಕರು ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ರಾಜಾನುಕುಂಟೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಆದರೆ ಈ ಎಫ್‌ಐಆರ್‌ ರದ್ದುಕೋರಿ ನ್ಯಾಯಾಲಯಕ್ಕೆ ಆರೋಪಿ ಗೋಪಾಲಕೃಷ್ಣ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಪ್ರಕರಣದಲ್ಲಿ ಹುರುಳಿಲ್ಲ ಎಂದು ಹೇಳಿ ಎಫ್‌ಐಆರನ್ನು ರದ್ದು ಮಾಡಿತ್ತು. ಮತ್ತೆ ಶಾಸಕ ವಿಶ್ವನಾಥ್‌ ಅವರು, ಎಸಿಜೆಎಂ ನ್ಯಾಯಾಲಯಕ್ಕೆ ತಮ್ಮ ಕೊಲೆ ಸಂಚಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಖಾಸಗಿ ದೂರು ಸಲ್ಲಿಸಿದ್ದರು. ಅಂತೆಯೇ ಶಾಸಕರ ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು ಪ್ರಕರಣದ ಮರು ತನಿಖೆಗೆ ಸೂಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾಸಕರ ಆರೋಪವೇನು?

‘ನನ್ನ ಗೃಹ ಕಚೇರಿಗೆ 2021ರ ನವೆಂಬರ್‌ 30ರಂದು ಅಂಚೆ ಮೂಲಕ ಲಕೋಟೆ ಬಂದಿತ್ತು. ಅದರಲ್ಲಿ ದೇವರಾಜ ಎಂಬಾತನ ತಪ್ಪೊಪ್ಪಿಗೆ ಪತ್ರ ಮತ್ತು ಪೆನ್‌ಡ್ರೈವ್‌ ಇತ್ತು. ಅದರಲ್ಲಿ ನನ್ನನ್ನು ಹತ್ಯೆ ಮಾಡಲು ಮುತ್ತುಗದಹಳ್ಳಿ ಗೋಪಾಲಕೃಷ್ಣ ಹಾಗೂ ದೇವರಾಜು ಚರ್ಚಿಸಿದ್ದ ಸಂಗತಿ ಇತ್ತು. ಅಲ್ಲದೆ ಈ ಕೃತ್ಯಕ್ಕೆ ರೌಡಿಗಳನ್ನು ಬಳಸಿಕೊಳ್ಳಲು ಕೂಡಾ ಆ ಇಬ್ಬರು ಮಾತನಾಡಿರುವ ಆಡಿಯೋ ಹಾಗೂ ವಿಡಿಯೋ ಸಾಕ್ಷ್ಯವಿದೆ’ ಎಂದು ಶಾಸಕ ವಿಶ್ವನಾಥ್‌ ಆರೋಪಿಸಿದ್ದಾರೆ.

‘ನಾನು ಯಲಹಂಕ ಕ್ಷೇತ್ರದಲ್ಲಿ ಜನ ಸೇವೆ ಮಾಡುತ್ತಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇನೆ. ಇದರಿಂದ ಕುಪಿತಗೊಂಡಿರುವ ಪ್ರತಿಸ್ಪರ್ಧಿ ಗೋಪಾಲಕೃಷ್ಣ ನನ್ನನ್ನು ಕೊಲೆ ಮಾಡಿಸಿ ತಾನು ಚುನಾವಣೆಯಲ್ಲಿ ಗೆಲ್ಲಲು ದೇವರಾಜ್‌ ಜತೆ ಸಂಚು ರೂಪಿಸಿದ್ದಾರೆ’ ಎಂದು ಶಾಸಕರು ಆಪಾದಿಸಿದ್ದಾರೆ.

Murder Plan: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್‌ ಕೇಸ್‌ಗೆ ಪ್ರತಿಕ್ರಿಯಿಸಿದ ಕಮಲ್ ಪಂತ್

ನ್ಯಾಯಾಲಯದ ಆದೇಶದ ಮೇರೆಗೆ ಶಾಸಕ ವಿಶ್ವನಾಥ್‌ ಅವರ ಕೊಲೆ ಸಂಚಿನ ಪ್ರಕರಣದ ಮರು ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಆರೋಪಿ ಕುಳ್ಳ ದೇವರಾಜನನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬನಿಗೆ ಹುಡುಕಾಟ ನಡೆದಿದೆ.

-ಮಲ್ಲಿಕಾರ್ಜುನ ಬಾಲದಂಡಿ, ಎಸ್‌ಪಿ, ಗ್ರಾಮಾಂತರ ಜಿಲ್ಲೆ.

Follow Us:
Download App:
  • android
  • ios