ಬೆಂಗಳೂರು (ಸೆ.11):  ಸ್ಯಾಂಡಲ್‌ವುಡ್‌ ಡ್ರಗ್‌ ದಂಧೆ ಪ್ರಕರಣದ ಹಿನ್ನೆಲೆಯಲ್ಲಿ ನನ್ನ ಮೇಲೆ ಹೊರಿಸಲಾಗುತ್ತಿರುವ ಆರೋಪಗಳ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲೇ ತನಿಖೆ ನಡೆಯಲಿ. ಸಾಬೀತಾದರೆ ನನ್ನ ಸಮಸ್ತ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ.

ಹೀಗಂತ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಸವಾಲು ಹಾಕಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಈ ಸವಾಲು ಹಾಕಿರುವ ಜಮೀರ್‌, ಈ ಸಂಬಂಧ ನಾನು ಯಾವುದೇ ತನಿಖೆಗೂ ಸಿದ್ಧ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲೇ ತನಿಖೆ ನಡೆಯಲಿ. ಆರೋಪ ಸಾಬೀತಾದರೆ ನನ್ನ ಎಲ್ಲ ಆಸ್ತಿ ಸರ್ಕಾರಕ್ಕೆ ಬರೆಯುತ್ತೇನೆ. ಆರೋಪ ಸುಳ್ಳಾದರೆ ಸಂಬರಗಿಯಗೆ ಏನು ಮಾಡಲಾಗುವುದು ಎಂಬುದನ್ನು ಸರ್ಕಾರ ತಿಳಿಸಬೇಕು ಎಂದರು.

ಆಪ್ತ ಶೇಖ್‌ನಿಂದ ಜಮೀರ್‌ಗೂ ಸುತ್ತಿಕೊಳ್ಳುತ್ತಾ ಡ್ರಗ್ ಉರುಳು?

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಜನಾ ಜೊತೆ ಹೋಗಿದ್ದೆ ಎಂಬ ಸಂಬರಗಿ ಆರೋಪ ಶುದ್ಧ ಸುಳ್ಳು. ಈ ಬಗ್ಗೆ ನನ್ನನ್ನು ತನಿಖೆಗೆ ಒಳಪಡಿಸಲು. ಅದಕ್ಕೆ ನನ್ನ ಯಾವುದೇ ಆಕ್ಷೇಪ ಇಲ್ಲ. ನನ್ನ ವಿಮಾನ ಪ್ರಮಾಣದ ದಾಖಲೆಗಳನ್ನು ಪರಿಶೀಲಿಸಲಿ. ಯಾವುದೇ ರೀತಿಯ ತನಿಖೆಯನ್ನು ಬೇಕಾದರೂ ಮಾಡಲಿ ನಾನು ಸಿದ್ಧನಿದ್ದೇನೆ ಎಂದರು.

ಸಂಬರಗಿ ಆರೋಪಿಸಿರುವಂತೆ ನಾನು ಸಂಜನಾ ಅವರ ಜೊತೆ ಶ್ರೀಲಂಕಾ ಪಾರ್ಟಿಯಲ್ಲಿ ಇದ್ದದ್ದು, ನಾನು ಅವರೊಂದಿಗೆ ಕೈಜೋಡಿಸಿದ್ದೇನೆ ಎಂಬುದು ತನಿಖೆಯಲ್ಲಿ ಸಾಬೀತಾದರೆ ನನ್ನ ಆಸ್ತಿಯನ್ನೂ ಸರ್ಕಾರಕ್ಕೆ ಬರೆದುಕೊಡುತ್ತೇನೆ. ಸರ್ಕಾರ ನನಗೆ ಏನು ಶಿಕ್ಷೆ ಬೇಕಾದರೂ ವಿಧಿಸಲಿ ಎಂದು ಹೇಳಿದರು.

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಪ್ರಕರಣದ ಪ್ರಮುಖ ಆರೋಪಿ ನಟಿ ಸಂಜನಾ ಗಿಲ್ರಾನಿ ಅವರ ಜೊತೆ ಮಾಜಿ ಸಚಿವರೂ ಆದ ಜಮೀರ್‌ ಅಹಮದ್‌ ಖಾನ್‌ ಶ್ರೀಲಂಕಾ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪ ನಿರಾಕರಿಸಿದ್ದ ಜಮೀರ್‌ ಅಹಮದ್‌ ಸುಳ್ಳು ಆರೋಪ ಮಾಡುವ ಮೂಲಕ ಸಂಬರಗಿ ನನ್ನ ತೇಜೋವಧೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಇತ್ತೀಚೆಗೆ ದೂರು ನೀಡಿದ್ದರು.