ನಿಂತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್‌ನಲ್ಲೇ ಸಜೀವ ದಹನವಾದ ಘಟನೆ ನಗರದ ಬ್ಯಾಡರಹಳ್ಳಿ ಡಿ ಗ್ರೂಪ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮುತ್ತಯ್ಯ ಸ್ವಾಮಿ (45) ಎಂದು ಗುರುತಿಸಲಾಗಿದೆ.
ಬೆಂಗಳೂರು (ಮಾ.09): ನಿಂತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್‌ನಲ್ಲೇ ಸಜೀವ ದಹನವಾದ ಘಟನೆ ನಗರದ ಬ್ಯಾಡರಹಳ್ಳಿ ಡಿ ಗ್ರೂಪ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮುತ್ತಯ್ಯ ಸ್ವಾಮಿ (45) ಎಂದು ಗುರುತಿಸಲಾಗಿದೆ. ಬಸ್ ಸುಮ್ಮನಹಳ್ಳಿ ಡಿಪೋ 31ಕ್ಕೆ ಸೇರಿದ್ದಾಗಿದೆ.
ಬಸ್ ತಡರಾತ್ರಿ ರೂಟ್ ಮುಗಿಸಿಕೊಂಡು 12ಕ್ಕೆ ಬಂದಿತ್ತು. ಹೀಗಾಗಿ ಲೇಟ್ ಆಗಿದ್ದರಿಂದ ಕಂಡಕ್ಟರ್ ಬಸ್‍ನ ಸೀಟ್‍ನಲ್ಲಿಯೇ ಮಲಗಿದ್ದರು. ಈ ವೇಳೆ ಬಸ್ಸಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು, ಮುತ್ತಯ್ಯ ಅವರು ಮಲಗಿದ್ದಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಂಗ್ರೆಸ್ ಅವಧಿಯ 59 ಕೇಸ್ ಲೋಕಾಯುಕ್ತ ತನಿಖೆಗೆ ಕೊಡ್ತೇವೆ: ಸಿಎಂ ಬೊಮ್ಮಾಯಿ
ಬಸ್‌ನಲ್ಲಿ ಕುಳಿತಿದ್ದಾಗಲೇ ವ್ಯಕ್ತಿ ಸಾವು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಾವು ಕುಳಿತ ಆಸನದಲ್ಲಿಯೇ ಹೃದಯಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಅಬ್ದುಲ್ ಖಾದಿರ್(61) ಮೃತಪಟ್ಟಿರುವ ವ್ಯಕ್ತಿ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳಲು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಮಂತ್ರಿ ಮಾಲ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ತಾವು ಕುಳಿತಿದ್ದ ಸೀಟ್ ಮೇಲೆಯೇ ಕುಸಿದು ಬಿದ್ದಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅವರನ್ನು ಕೆಳಗಿಳಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಾತರಿ ಪಡಿಸಿದರು. ಈ ಕುರಿತು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಿವೃತ್ತ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಮುನಿನಂಜಯ್ಯ ಎಂಬುವರು ಹೃದಯಸ್ತಂಭನದಿಂದ ಮೃತಪಟ್ಟಿದ್ದರು.
ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು: ಜೆ.ಪಿ.ನಡ್ಡಾ ಟೀಕಾ ಪ್ರಹಾರ
ಬಿಎಂಟಿಸಿ ಬಸ್ ಚಾಲಕ ಸೆರೆ: ಹಿಟ್ ಅಂಡ್ ರನ್ ಅಪಘಾತದಲ್ಲಿ ಸ್ವಿಗ್ಗಿ ಡೆಲವರಿ ಬಾಯ್ ಸಾವಿಗೆ ಕಾರಣವಾಗಿದ್ದ ಬಿಎಂಟಿಸಿ ಬಸ್ ಚಾಲಕನೊಬ್ಬನನ್ನು ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಎಂಟಿಸಿ ಬಸ್ ಚಾಲಕ ಬಸವರಾಜು ಬಂಧಿತನಾಗಿದ್ದು, ಫೆ.19 ರಂದು ಬನ್ನೇರುಘಟ್ಟ ಮುಖ್ಯ ರಸ್ತೆ ಜಲಭವನ ಮುಂಭಾಗ ಬೈಕ್‌ಗೆ ಬಸ್ ಗುದ್ದಿಸಿ ಆರೋಪಿ ಪರಾರಿಯಾಗಿದ್ದ. ಈ ಘಟನೆಯಲ್ಲಿ ಸ್ವಿಗ್ಗಿ ಡಿಲವರಿ ಬಾಯ್ ಸೈನುಲ್ ಅಹಮ್ಮದ್ ಬಾರ್ಬುಲಿಯಾ (20) ಮೃತಪಟ್ಟಿದ್ದರೆ, ಆತನ ಸ್ನೇಹಿತ ತೀವ್ರವಾಗಿ ಗಾಯಗೊಂಡಿದ್ದ. ಈ ಅಪಘಾತದ ಬಳಿಕ ಬಸ್ ನಿಲ್ಲಿಸದೆ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
