ಪೊಲೀಸರು ಪ್ರಕರಣದಲ್ಲಿ ‘ಬಿ’ ರಿಪೋರ್ಟ್‌ ಹಾಕುತ್ತಾರೋ ಅಥವಾ ಚಾರ್ಜ್‌ಶೀಟ್‌ ಹಾಕುತ್ತಾರೋ ಅದರ ಆಧಾರದಲ್ಲಿ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾಯಾಧೀಶರು. 

ಸಾಗರ(ಜೂ.25):  ತಾಲೂಕಿನ ವರದಹಳ್ಳಿ ರಸ್ತೆಯ ವಸತಿ ಶಾಲೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಫಾಸ್ಟ್‌ ಟ್ರ್ಯಾಕ್‌ ಸೆಷನ್ಸ್‌ ನ್ಯಾಯಾಲಯ (1) (ಪೋಕ್ಸೋ)ರಲ್ಲಿ ಶುಕ್ರವಾರ ನಡೆದ ವಿಚಾರಣೆಯಲ್ಲಿ ವಸತಿ ಶಾಲೆ ಮುಖ್ಯಸ್ಥರಿಗೆ ನ್ಯಾಯಾಧೀಶೆ ಲತಾ ಅವರು .1 ಲಕ್ಷ ಮೊತ್ತದ ಬಾಂಡ್‌ ಹಾಗೂ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದ್ದಾರೆ.

ಶುಕ್ರವಾರ ನಡೆದ ವಿಚಾರಣೆಯಲ್ಲಿ ಆಪಾದಿತರ ಪರ ವಾದ ಮಂಡಿಸಿದ ನ್ಯಾಯವಾದಿ ಅಶೋಕ್‌ ಭಟ್‌, ಮೃತ ವಿದ್ಯಾರ್ಥಿನಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ತನ್ನೊಂದಿಗೆ ವಸತಿ ಶಾಲೆಯಲ್ಲಿದ್ದ ಇತರ ಮಕ್ಕಳೊಂದಿಗೆ ಯಾವುದೇ ವಿಚಾರವನ್ನೂ ಹೇಳಿಲ್ಲ. ಉಳಿದ ಮಕ್ಕಳು ಮೃತರ ತಾಯಿಗೆ ಹೇಳಿ, ಅವರಿಂದ ದೂರು ದಾಖಲಿಸಿದ್ದರು. ಶಾಲಾ ಮುಖ್ಯಸ್ಥರು ವಿದ್ಯಾರ್ಥಿನಿಯ ಕೈ-ಕಾಲಿಗೆ ಮುಲಾಮು ಹಚ್ಚಿದ್ದರ ಕುರಿತು ಆಕೆ ಸಹಪಾಠಿಗಳಿಗೆ ಹೇಳಿದ ಯಾವುದೇ ದಾಖಲೆಗಳಿಲ್ಲ. ಮುಖ್ಯವಾಗಿ ಜೂನ್‌ 8ರಂದು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರ ಅಡಿಯಲ್ಲೇ ಶಾಲಾ ಮುಖ್ಯಸ್ಥರನ್ನು ಬಂಧಿಸಿದ್ದಾಗಿಯೂ ಹೇಳಿದ್ದು, ಎರಡು ದಿನದ ಬಳಿಕ (ಜೂ. 10ರಂದು) ದಾಖಲಾದ ಮತ್ತೊಂದು ದೂರಿನ ಆಧಾರದಲ್ಲಿ ಶಾಲಾ ಮುಖ್ಯಸ್ಥರನ್ನು ವಶಕ್ಕೆ ಪಡೆಯಲಾಗಿದೆ ಎಂದೂ ತಿಳಿಸಿದ್ದಾರೆ. ಹಾಗಾದರೆ ಎರಡು ದಿನ ಅವರನ್ನು ಯಾಕೆ ನ್ಯಾಯಾಧೀಶರ ಎದುರು ಹಾಜರುಪಡಿಸಲಿಲ್ಲ? ಘಟನೆ ನಡೆದ ಬಳಿಕ ಬಾಲಕಿಯ ಕುಟುಂಬದವರೆಲ್ಲರ ಸಮ್ಮುಖದಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿತ್ತು. ಹಾಗಿದ್ದರೆ ಅಂದು ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಯಾವೆಲ್ಲ ಆರೋಪಗಳಿದ್ದವು? ಅದೇನಾಯಿತು? ಮೊದಲಿಲ್ಲದ ದೂರುಗಳನ್ನು ಜೂ. 10ರಂದು ಹೇಗೆ ಸೃಷ್ಟಿಸಿದರು ಎಂದೆಲ್ಲ ಕೇಳಿದ್ದರು.

ಹೈಟೆಕ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಗಾಂಜಾ ಕೃಷಿ: ಮೆಡಿಕಲ್ ಸ್ಟೂಡೆಂಟ್ಸ್ ಅರೆಸ್ಟ್!

ಪೊಲೀಸರು ಪ್ರಕರಣದಲ್ಲಿ ‘ಬಿ’ ರಿಪೋರ್ಟ್‌ ಹಾಕುತ್ತಾರೋ ಅಥವಾ ಚಾರ್ಜ್‌ಶೀಟ್‌ ಹಾಕುತ್ತಾರೋ ಅದರ ಆಧಾರದಲ್ಲಿ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ವಸತಿ ಶಾಲಾ ಮುಖ್ಯಸ್ಥರ ವಿರುದ್ಧ ಪೋಕ್ಸೋ ಸೆಕ್ಷನ್‌ 8, 12, ಅಟ್ರಾಸಿಟಿ ಸೆಕ್ಷನ್‌ 3, ಐಪಿಸಿ ಸೆಕ್ಷನ್‌ 504, 506ರ ಅಡಿಯಲ್ಲಿ ಮೃತ ಬಾಲಕಿ ಪೋಷಕರಿಂದ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.