ಬೆಂಗಳೂರು(ಡಿ.23): ಮಹಿಳೆಗೆ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಪಾಲಿಕೆ ಮಾಜಿ ಸದಸ್ಯರೊಬ್ಬರ ವಿರುದ್ಧ ವಿಲ್ಸನ್‌ಗಾರ್ಡನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೂಜಾ ಅಗರ್ವಾಲ್‌ ಎಂಬುವರು ಕೊಟ್ಟ ದೂರಿನ ಮೇರೆಗೆ ಧರ್ಮರಾಯ ದೇವಸ್ಥಾನ ವಾರ್ಡ್‌ ಮಾಜಿ ಸದಸ್ಯ ಧನರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನರಾಜ್‌, ತಾವು ಯಾರನ್ನು ನಿಂದಿಸಿಲ್ಲ, ಬದಲಾಗಿ ಮಹಿಳೆಯೇ ನಿಂದಿಸಿದ್ದು, ಈ ಬಗ್ಗೆ ಪ್ರತಿ ದೂರು ನೀಡುವುದಾಗಿ ತಿಳಿಸಿದ್ದಾರೆ.

ಧನರಾಜ್‌ ಅವರು ಪೈಪ್‌ ಖರೀದಿಗಾಗಿ ಸೋಮವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಲಾಲ್‌ಬಾಗ್‌ ರಸ್ತೆಯಲ್ಲಿರುವ ಕೊಲ್ಕತ್ತಾ ಟ್ಯೂಬ್‌ ಸೆಂಟರ್‌ ಅಂಗಡಿಗೆ ಹೋಗಿ ಪೈಪ್‌ನ ದರ ಕೇಳಿದ್ದರು. ಅಂಗಡಿ ಮಾಲೀಕರಾದ ಸಾವರ್‌ಮಲ್‌ ಅಗರ್ವಾಲ್‌ ಅವರು ಚೀಟಿಯಲ್ಲಿ ಪೈಪ್‌ಗಳ ದರ ಬರೆದುಕೊಟ್ಟಿದ್ದರು.

ಲಿವ್ ಇನ್ ಸವಿ ಕಂಡ 70 ವೃದ್ಧ ಮಾಡಿದ ಕೆಲಸಕ್ಕೆ ಮಕ್ಕಳೆ ಮೃತ್ಯುವಾದರು!

ಈ ವೇಳೆ ಧನರಾಜ್‌ ಅವರು ಇತರೆ ಅಂಗಡಿಗಿಂತ ನಿಮ್ಮಲ್ಲಿ ಹೆಚ್ಚಿನ ಬೆಲೆ ಇದೆ ಎಂದು ಕೇಳಿ ಗಲಾಟೆ ಮಾಡಿದರು. ಈ ವೇಳೆ ಮಾಲೀಕ ಸಾವರ್‌ಮಲ್‌ ಅವರ ಸೊಸೆ ಪೂಜಾ ಅಗರ್ವಾಲ್‌ ಮಧ್ಯ ಪ್ರವೇಶ ಮಾಡಿ ಗಲಾಟೆ ಮಾಡಬೇಡಿ ಎಂದು ಹೇಳಿದ್ದಕ್ಕೆ ಧನರಾಜ್‌ ಅವರು ಅವಾಚ್ಯ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನರಾಜ್‌, ನಾನು ಪೈಪ್‌ ಕೊಳ್ಳಲು ಮಹಿಳೆಯ ಅಂಗಡಿಗೆ ಹೋಗಿದ್ದೆ. ಇತರ ಅಂಗಡಿಗಿಂತ ಹೆಚ್ಚಿನ ಬೆಲೆ ಹಾಕಲಾಗಿರುವ ಪ್ರಶ್ನೆ ಮಾಡಿದೆ. ಅಷ್ಟಕ್ಕೆ ಅಂಗಡಿ ಮಾಲೀಕ ನಾನು ಕೊಟ್ಟಚೀಟಿಯನ್ನು ಎಸೆದರು. ಇದನ್ನು ಕೇಳಿದ್ದಕ್ಕೆ ಒಳಗಿನಿಂದ ಬಂದ ಅವರ ಸೊಸೆ ಏಕಾಏಕಿ ಜೋರಾಗಿ ಮಾತನಾಡಿ ಅವಾಚ್ಯ ಶಬ್ದದಿಂದ ನಿಂದಿಸಿದರು. ಇದೀಗ ನನ್ನ ವಿರುದ್ಧವೇ ದೂರು ನೀಡಿದ್ದಾರೆ. ನಾನು ಕೂಡ ದೂರು ನೀಡುತ್ತೇನೆ. ಪೊಲೀಸರು ಅಂಗಡಿಯಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಲಿ. ಗಲಾಟೆ ಮಾಡಿದ್ದು, ಯಾರು ಎಂಬ ಸತ್ಯ ತಿಳಿಯಲಿದೆ ಎಂದು ತಿಳಿಸಿದರು.