ಬೆಂಗಳೂರು(ಜ.03): ದುಬಾರಿ ಬಡ್ಡಿ ಆಮಿಷವೊಡ್ಡಿ ಜನರಿಗೆ ಲಕ್ಷಾಂತರ ರುಪಾಯಿ ವಂಚಿಸಿದ್ದಾರೆ ಎಂದು ತಮಿಳುನಾಡು ಮೂಲದ ಖಾಸಗಿ ಕಂಪನಿಯೊಂದರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ವಿಶ್ವಪ್ರಿಯಾ ಫೈನಾನ್ಸಿಯಲ್‌ ಸರ್ವಿಸಸ್‌ ಆ್ಯಂಡ್‌ ಸೆಕ್ಯೂರಿಟೀಸ್‌ ಪ್ರೈ.ಲಿ ಕಂಪನಿ ವಿರುದ್ಧ ಆರೋಪ ಬಂದಿದೆ. ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಕಂಪನಿ ಮತ್ತು ಮುಖ್ಯಸ್ಥರಾದ ಆರ್‌.ಸುಬ್ರಹ್ಮಣಿಯನ್‌, ಆರ್‌.ನಾರಾಯಣ್‌, ರಾಜಾ ರತ್ನಮ್‌, ಟಿ.ಎಸ್‌.ರಾಘವನ್‌ ಮತ್ತು ಏಜೆಂಟ್‌ಗಳಾದ ಶ್ರೀಮತಿ, ಡಾ ಆದಿಶೇಷನ್‌, ಪಿ.ಸದಾನಂದ, ರಾಜೇಂದ್ರ ಕುಮಾರ್‌ ವಿರುದ್ಧ ಗಿರಿನಗರ ಮತ್ತು ಸಿದ್ದಾಪುರದಲ್ಲಿ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ವರ್ಷದ ಹಿಂದೆಯೇ ಇಡಿ ಬಲೆ:

ತಮಿಳುನಾಡು ಮೂಲದ ಸುಬ್ರಹ್ಮಣಿಯನ್‌, 2012ರಲ್ಲಿ ಎಂ.ಜಿ. ರಸ್ತೆಯ ಮಿತ್ತಲ್‌ ಟವ​ರ್‍ಸ್ನಲ್ಲಿ ಕಂಪನಿ ಕಚೇರಿ ಆರಂಭಿಸಿದ್ದರು. ಶೇ.10ರಿಂದ 12ರಷ್ಟುದುಬಾರಿ ಬಡ್ಡಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿದ್ದ. ಇದಕ್ಕಾಗಿ ನೂರಾರು ಏಜೆಂಟ್‌ಗಳನ್ನು ನೇಮಿಸಿಕೊಂಡಿದ್ದ ಆತ, ಏಜೆಂಟರಿಗೆ ಠೇವಣಿ ಸಂಗ್ರಹಿಸಿದರೆ ವೇತನದ ಜತೆಗೆ ಕಮಿಷನ್‌ ಕೊಡುವುದಾಗಿ ಆಮಿಷವೊಡ್ಡಿದ್ದ. ಈ ಕಮಿಷನ್‌ ಆಸೆಗೊಳಗಾಗಿ ಏಜೆಂಟರು ಸಾವಿರಾರು ಗ್ರಾಹಕರನ್ನು ಸೆಳೆದಿದ್ದರು.

ಉತ್ತರಪ್ರದೇಶದಿಂದ ಕಾರಲ್ಲಿ ಬಂದ ಕಳ್ಳರು: ಬೆಂಗ್ಳೂರು ಮನೆಗಳಲ್ಲಿ ಕಳ್ಳತನ

2015ರಲ್ಲಿ ತಮಿಳುನಾಡಿನಲ್ಲಿ ಸುಬ್ರಹ್ಮಣಿಯನ್‌ ವಿರುದ್ಧ ವಂಚನೆ ಪ್ರಕರಣ ದಾಖಲಾಯಿತು. ಬಳಿಕ ಆತನ ವಿರುದ್ಧ ತಮಿಳುನಾಡು ಪೊಲೀಸರು ಮಾತ್ರವಲ್ಲದೆ ಕೇಂದ್ರದ ಐಟಿ ಮತ್ತು ಇಡಿ ಅಧಿಕಾರಿಗಳು ಸಹ ತನಿಖೆ ನಡೆಸಿದ್ದಾರೆ. ಕೊನೆಗೆ ಆ ಪ್ರಕರಣದಲ್ಲಿ ಆತ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಈಗ ಮತ್ತೆ ಸಂಕಷ್ಟಎದುರಾಗಿದೆ. ಐದು ವರ್ಷಗಳ ಬಳಿಕ ಸುಬ್ರಹ್ಮಣಿಯನ್‌ ವಿರುದ್ಧ ಬೆಂಗಳೂರಿನ ಹೂಡಿಕೆದಾರರು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

300 ಕೋಟಿ ಆರೋಪ?

ಬಡ್ಡಿ ಆಸೆ ತೋರಿಸಿ ಜನರಿಗೆ ಸುಮಾರು .300 ಕೋಟಿಗೂ ಅಧಿಕ ಮೊತ್ತದ ಹಣ ಪಡೆದು ವಂಚಿಸಿದ್ದಾರೆ ಎಂದು ಕಂಪನಿಯ ಹೂಡಿಕೆದಾರರು ಆರೋಪಿಸಿದ್ದಾರೆ. ಆದರೆ ಇದುವರೆಗಿನ ತನಿಖೆಯಲ್ಲಿ .52 ಲಕ್ಷ ವಂಚನೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.