ಬೆಂಗಳೂರು(ಜ.03): ಉತ್ತರ ಭಾರತದಿಂದ ಕಾರಿನಲ್ಲಿ ಬಂದು ನಗರದಲ್ಲಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಅವರಿಂದ ನಾಲ್ಕು ಕೆ.ಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಉತ್ತರ ಪ್ರದೇಶದ ಫಯೂಮ್‌ ಅಲಿಯಾಸ್‌ ಎಟಿಎಂ ಫಯೂಮ್‌ ಹಾಗೂ ಮುರಸಲೀಂ ಮೊಹಮ್ಮದ್‌ ಅಲಿಯಾಸ್‌ ಸಲೀಂ ಬಂಧಿತರಾಗಿದ್ದು, ಆರೋಪಿಗಳಿಂದ .2.25 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಕಳ್ಳತನ ಪ್ರಕರಣದಲ್ಲಿ ಸ್ಥಳೀಯ ಪೊಲೀಸರಿಗೆ ಆರೋಪಿಗಳು ಸೆರೆಯಾಗಿದ್ದರು. ಬಳಿಕ ಸಿಸಿಬಿ ಪೊಲೀಸರು, ಬೆಂಗಳೂರಿನ ಕೃತ್ಯಗಳಲ್ಲಿ ಫಯೂಮ್‌ ಪಾತ್ರದ ಖಚಿತ ಮಾಹಿತಿ ಕಲೆ ಹಾಕಿ ವಶಕ್ಕೆ ಪಡೆದು ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಯೂಮ್‌ ಪತ್ತೆಗೆ .10 ಸಾವಿರ ಬಹುಮಾನ:

ಉತ್ತರ ಪ್ರದೇಶದ ಫಯೂಮ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ವಿರುದ್ಧ ದರೋಡೆ, ಕೊಲೆ ಹಾಗೂ ಕೊಲೆ ಯತ್ನ ಸೇರಿದಂತೆ ಸುಮಾರು 40 ಪ್ರಕರಣಗಳು ದಾಖಲಾಗಿವೆ. ನಿರಂತರ ಅಪರಾಧ ಕೃತ್ಯಗಳ ಮೂಲಕ ಕೈ ಸಿಗದೆ ಓಡಾಡುತ್ತಿದ್ದ ಆತನ ಪತ್ತೆಗೆ ಉತ್ತರ ಪ್ರದೇಶ ಸರ್ಕಾರ .10 ಸಾವಿರ ನಗದು ಬಹುಮಾನ ಘೋಷಿಸಿತ್ತು. 2016ರಲ್ಲಿ ಉತ್ತರ ಪ್ರದೇಶದ ನೋಯಿಡಾ ಜೈಲಿನಲ್ಲಿದ್ದಾಗ ತನ್ನ ತಂಡ ಕಟ್ಟಿದ್ದ. ಬಳಿಕ 2017ರಿಂದ ಕಳ್ಳತನ ಕೃತ್ಯದಲ್ಲಿ ಸಕ್ರಿಯವಾಗಿದ್ದಾರೆ. ಬೆಂಗಳೂರು, ಬೆಳಗಾವಿ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಗೋವಾದ ಪಣಜಿ, ಹೈದರಾಬಾದ್‌ನಲ್ಲಿ ಫಯೂಮ್‌ ಗ್ಯಾಂಗ್‌ ಸರಣಿ ಮನೆಗಳ್ಳತನ ಮಾಡಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಅತ್ತ ಗಂಡನ ಕಿರುಕುಳ, ಇತ್ತ ಪಾಗಲ್ ಪ್ರೇಮಿ ಕಾಟ: ಬೆಳ್ಳಂ ಬೆಳಗ್ಗೆ ಮಾರಣ ಹೋಮ!

ಮನೆಗಳಲ್ಲಿ ಕಳವು ಮಾಡಿದ್ದ ಆಭರಣಗಳನ್ನು ಹರಿಯಾಣ ರಾಜ್ಯದ ಗುರಗಾಂವ್‌ ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿ ಅಶೋಕ್‌ ಲಾಟಿ ಮೂಲಕ ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಅದರಂತೆ ಹರಿಯಾಣಕ್ಕೆ ತೆರಳಿ ಸಿಸಿಬಿ ತಂಡ ಪರಿಶೀಲಿಸಿತು. ಆಗ ಅಶೋಕ್‌ ಲಾಟಿಯ ಬಗ್ಗೆ ಗುರಗಾಂವ್‌ ಜಿಲ್ಲೆಯ ಜೈಲಿನ ಕಾರಾಗೃಹ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಕಳ್ಳತನ ಕೃತ್ಯದಲ್ಲಿ ದೋಚಲಾದ ಆಭರಣ ಹಾಗೂ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು. ತಮ್ಮ ಪಾಲಿಗೆ ಬಂದ ಒಡವೆಗಳನ್ನು ಅವರೆಲ್ಲ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳ್ಳತನ ಕೃತ್ಯದಲ್ಲಿ ತಾನು ಸಂಪಾದಿಸಿದ್ದ ಒಡವೆಯನ್ನು ಮನೆ ಹಾಗೂ ತನ್ನ ತಂಗಿ ಮನೆಯಲ್ಲಿ ಫಯೂಮ್‌ ಅಡಗಿಸಿಟ್ಟಿದ್ದ. ಒಟ್ಟಾರೆ ಆತನ ತಂಡದಿಂದ 4 ಕೆ.ಜಿ. ಚಿನ್ನಾಭರಣ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಗಲು ಹೊತ್ತಿನಲ್ಲೇ ಕೃತ್ಯ

ಹಗಲು ಹೊತ್ತಿನಲ್ಲೇ ಅಪರಾಧ ಕೃತ್ಯ ಎಸಗುವುದು ಫಯೂಮ್‌ ತಂಡ ಮಾದರಿಯಾಗಿತ್ತು. ಹರಿಯಾಣದಿಂದ ಕಾರಿನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ನಗರ ಹೊರವಲಯದಲ್ಲಿ ಸುತ್ತಾಡುತ್ತಿದ್ದರು. ಕಣ್ಣಿಗೆ ಬೀಳುವ ಒಂಟಿ ಮನೆಗಳಿಗೆ ಹೋಗಿ ಕಾಲಿಂಗ್‌ ಬೇಲ್‌ ಒತ್ತುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರು ಇಲ್ಲದೆ ಹೋದರೆ ಕೆಲವೇ ಕ್ಷಣಗಳಲ್ಲಿ ಕನ್ನ ಹಾಕುತ್ತಿದ್ದರು. ಇದೇ ರೀತಿ ಕೆಲ ಗಂಟೆಗಳಲ್ಲಿ ಐದಾರು ಮನೆಗಳಲ್ಲಿ ದೋಚುತ್ತಿದ್ದರು. ಕೃತ್ಯ ಎಸಗಿದ ಬಳಿಕ ಯಾವುದೇ ಕಾರಣಕ್ಕೂ ಆ ನಗರದಲ್ಲಿ ಅವರು ಇರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.