*20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ವಿದ್ಯಾರ್ಥಿ ಸೆರೆ*ಮಾಡಲಿಂಗ್‌ ಹೆಸರಿನಲ್ಲಿ ಫೋಟೋ ಪಡೆದು ಮಾರ್ಫಿಂಗ್‌*ನೊಂದ ಯುವತಿ ಹಲಸೂರು ಪೊಲೀಸ್‌ ಠಾಣೆಗೆ ದೂರು

ಬೆಂಗಳೂರು (ಜ. 12): ಇನ್ಸ್‌ಸ್ಟಾಗ್ರಾಂನಲ್ಲಿ (Instagram) ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ತಾನು ಮಾಡೆಲಿಂಗ್‌ಗೆ ಅವಕಾಶ ಕೊಡಿಸುವುದಾಗಿ ಯುವತಿಯರ ಬೋಲ್ಡ್‌ ಲುಕ್‌ನ ಫೋಟೋ ಪಡೆದು ಬಳಿಕ ಅಶ್ಲೀಲವಾಗಿ ಮಾರ್ಫಿಂಗ್‌ ಮಾಡಿ ಹಣಕ್ಕೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಡಗು ಮೂಲದ ಪ್ರಪಂಚ್‌ ನಾಚಪ್ಪ (Prapanchan Nachappa) (25)) ಬಂಧಿತ. ಆರೋಪಿಯು ನಗರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು, ತಾನು ಮಾಡಲ್‌ ಎಂದು ಪರಿಚಯಿಸಿಕೊಂಡಿದ್ದ. ಅಂತೆಯೆ ಮಾಡೆಲಿಂಗ್‌ಗೆ ಯುವತಿಯರು ಬೇಕಾಗಿದ್ದಾರೆ ಎಂದು ಫೋಸ್ಟ್‌ ಹಾಕಿ, ಸಂಪರ್ಕಕ್ಕಾಗಿ ತನ್ನದೇ ಮೊಬೈಲ್‌ ನಂಬರ್‌ ಹಂಚಿಕೊಂಡಿದ್ದ. ಈ ಫೋಸ್ಟ್‌ ನೋಡಿದ್ದ ಮಾಡೆಲಿಂಗ್‌ ಆಸಕ್ತ ಯುವತಿಯರು ಆತನ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿದ್ದರು.

ಇದನ್ನೂ ಓದಿ:Cheating Case: ದೊಡ್ಡವರೆಲ್ಲ ಗೊತ್ತೆಂದು ಲಕ್ಷ ಲಕ್ಷ ನುಂಗಿದ, ಲಾಕ್ ಡೌನ್ ಈತನ ವಂಚನೆಯ ರಹದಾರಿ!

ಈ ವೇಳೆ ಆರೋಪಿಯು ಮಾಡೆಲಿಂಗ್‌ಗೆ ಪೂರಕವಾಗಿ ಬೋಲ್ಡ್‌ ಆಗಿ ತೆಗೆಸಿರುವ ಫೋಟೋಗಳನ್ನು ವಾಟ್ಸಾಪ್‌ ಮಾಡುವಂತೆ ಕೇಳಿ ಪಡೆಯುತ್ತಿದ್ದ. ಬಳಿಕ ಫೋಟೋಗಳನ್ನು ಮಾರ್ಫಿಂಗ್‌ ಮಾಡಿ ಅಶ್ಲೀಲ ಫೋಟೋಗೆ ಯುವತಿಯರು ಮುಖ ಸೇರಿಸಿ ಆ ಫೋಟೋಗಳನ್ನು ಮತ್ತೆ ಯುವತಿಯರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದ. ಹಣ ನೀಡಲು ನಿರಾಕರಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೂ. 10 ಸಾವಿರದಿಂದ 1 ಲಕ್ಷ ಸುಲಿಗೆ: ಆರೋಪಿಯು ಯುವತಿಯರ ಮಾರ್ಫಿಂಗ್‌ ಫೋಟೋ ಮುಂದಿಟ್ಟುಕೊಂಡು ಬೆದರಿಸಿ 10 ಸಾವಿರ ರು.ನಿಂದ ಒಂದು ಲಕ್ಷ ರು. ವರೆಗೂ ಹಣವನ್ನು ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ಸುಮಾರು 20ಕ್ಕೂ ಅಧಿಕ ಯುವತಿಯರು ಆರೋಪಿಯಿಂದ ವಂಚನೆಗೆ ಒಳಗಾಗಿದ್ದಾರೆ. ಆತನ ಬ್ಲ್ಯಾಕ್‌ ಮೇಲ್‌ಗೆ ಹೆದರಿ ಆತ ನೀಡಿದ ಖಾತೆಗೆ ಆನ್‌ಲೈನ್‌ನಲ್ಲಿ ಹಣ ಕಳುಹಿಸಿದ್ದಾರೆ. ಆರೋಪಿಯು ಇನ್ಸ್‌ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ಆರೋಪಿ ನಕಲಿ ಖಾತೆ ತೆರೆದಿದ್ದರಿಂದ ಯುವತಿಯರು ಪೂರ್ವಪರ ವಿಚಾರಿಸದೆ ಆರೋಪಿಯ ಮೋಸದ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿDrugs Bust in Bengaluru: ವಿದೇಶಿ ಸಹೋದರರ ಡ್ರಗ್ಸ್‌ ಫ್ಯಾಕ್ಟರಿ ರಾಜಧಾನಿಯಲ್ಲಿ ಪತ್ತೆ..!

ನೊಂದ ಯುವತಿ ದೂರು:

ಆರೋಪಿಯ ಬ್ಲ್ಯಾಕ್‌ ಮೇಲ್‌ನಿಂದ ನೊಂದ ಯುವತಿಯೊಬ್ಬಳು ಇತ್ತೀಚೆಗೆ ಹಲಸೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಆರೋಪಿಯ ಮೋಸದ ಜಾಲ ಹಾಗೂ ಬ್ಲ್ಯಾಕ್‌ ಮೇಲ್‌ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿಯ ವಂಚನೆ ಜಾಲ ಬೆಳಕಿಗೆ ಬಂದಿದೆ.

ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರಿಗೆ ಭಾರೀ ಮೋಸ

 ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ (Matrimony Website)  ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಖತರ್ನಾಕ್‌ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ (Vijayapur) ಮೂಲದ ಜೈಭೀಮ್‌ ವಿಠಲ್‌ ಪಡುಕೋಟಿ (33) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಮೊಬೈಲ್‌, ನಿಸ್ಸಾನ್‌ ಕಾರು ವಶಪಡಿಸಿಕೊಳ್ಳಲಾಗಿದೆ. ಆತನ ಬ್ಯಾಂಕ್‌ ಖಾತೆಯಲ್ಲಿದ್ದ 1.66 ಲಕ್ಷ ರು.ಗೆ ತಡೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾ​ರೆ.

ಆರೋಪಿಯ ತಂದೆ ಹೆಸ್ಕಾಂ ನೌಕರರಾಗಿದ್ದು, ಅಕಾಲಿಕವಾಗಿ ಮೃತಪಟ್ಟಿದ್ದರು. ಬಳಿಕ ಅನುಕಂಪದ ಆಧಾರದ ಮೇಲೆ ಹೆಸ್ಕಾಂಗೆ ಲೈನ್‌ಮ್ಯಾನ್‌ ಕೆಲಸಕ್ಕೆ ಸೇರಿದ್ದ ಜೈ ಭೀಮ್‌, ನಗರದಲ್ಲಿ 8 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದ. ಬಳಿಕ ಮುದ್ದೇಬಿಹಾಳದ ಸುನಿತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಈತ, ಆಕೆಯ ಜತೆ 2013ರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ. ಆಗ ಆಕೆಯನ್ನು ಕೊಂದು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಇದಾದ ನಂತರ ಜೀವನ ನಿರ್ವಹಣೆಗೆ ಸುಲಭವಾಗಿ ಹಣ ಗಳಿಸಲು ವಂಚನೆಗೆ ಇಳಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.