Bengaluru crime: ಕಡಿಮೆ ಬಡ್ಡಿ ಆಸೆ ತೋರಿಸಿ ಖೋಟಾ ನೋಟು ಚಲಾವಣೆ!
ಫೈನಾನ್ಷಿಯರ್‌ಗಳ ಸೋಗಿನಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಜನರಿಗೆ ನಂಬಿಸಿ ಖೋಟಾ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದ ಮೂವರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಬೆಂಗಳೂರು (ಜ.7) : ಫೈನಾನ್ಷಿಯರ್‌ಗಳ ಸೋಗಿನಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಜನರಿಗೆ ನಂಬಿಸಿ ಖೋಟಾ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದ ಮೂವರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ತಮಿಳುನಾಡಿ(Tamilunadu)ನ ಪಿಚ್ಚಿ ಮುತ್ತು, ನಲ್ಲಕಣಿ(Pichhi and nallakani) ಹಾಗೂ ಸುಬ್ರಹ್ಮಣಿಯನ್(Subramaniyan) ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಪನ್ನೀರು ಸೆಲ್ವಂ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ .1.26 ಕೋಟಿ ಮೌಲ್ಯದ 2000 ಹಾಗೂ 500 ಮುಖಬೆಲೆಯ ಖೋಟಾ ನೋಟುಗಳು, ಪ್ರಿಂಟರ್ ಹಾಗೂ ಹಾರ್ಡ್‌ಡಿಸ್‌್ಕ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಖೋಟಾ ನೋಟು ಮುದ್ರಿಸಿ ಬಳಿಕ ಅವುಗಳನ್ನು ಚಲಾವಣೆ ಮಾಡಲು ನಗರಕ್ಕೆ ವಂಚಕರ ತಂಡವೊಂದು ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಎಸಿಪಿ ಜಗದೀಶ್ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳೂರಲ್ಲಿ 4.50 ಲಕ್ಷ ರು.ಗಳ ಖೋಟಾ ನೋಟು ಸಾಗಾಟ ಪತ್ತೆ, ಇಬ್ಬರು ಸೆರೆ
ಬ್ಯಾಂಕ್‌ಗಳ ಬಳಿ ಗ್ರಾಹಕರಿಗೆ ಗಾಳ:
ಹಲವು ದಿನಗಳಿಂದ ಖೋಟಾ ನೋಟು(Fake notes) ದಂಧೆಯಲ್ಲಿ ಈ ತಮಿಳುನಾಡಿನ ಗ್ಯಾಂಗ್ ನಿರತವಾಗಿತ್ತು. ನಲ್ಲಕಣಿ ಮನೆಯಲ್ಲಿ ಖೋಟಾ ನೋಟುಗಳನ್ನು ಮುದ್ರಿಸಿ ಬಳಿಕ ಅವುಗಳನ್ನು ನಾನಾ ಬಗೆಯಲ್ಲಿ ವಿಲೇವಾರಿ ಮಾಡುತ್ತಿದ್ದರು. ಪ್ರತಿಷ್ಠಿತ ಬ್ಯಾಂಕ್‌ಗಳ ಬಳಿ ಫೈನಾನ್ಸ್ ಸಂಸ್ಥೆಯ ಪ್ರತಿನಿಧಿಗಳಂತೆ ಜನರಿಗೆ ಗಾಳ ಹಾಕುತ್ತಿದ್ದರು. ಗೃಹ ಅಥವಾ ವಾಣಿಜ್ಯ ಸೇರಿದಂತೆ ಇತರೆ ಕೆಲಸಗಳಿಗೆ ಲಕ್ಷಾಂತರ ರುಪಾಯಿ ಸಾಲ ಪಡೆಯಲು ಬರುವ ಗ್ರಾಹಕರನ್ನು ಆರೋಪಿಗಳಾದ ಪನ್ನೀರು ಸೆಲ್ವಂ ಹಾಗೂ ಸುಬ್ರಹ್ಮಣಿಯನ್ ಪರಿಚಯಿಸಿಕೊಳ್ಳುತ್ತಿದ್ದರು. ಕಡಿಮೆ ಬಡ್ಡಿಗೆ ಕೋಟ್ಯಂತರ ಸಾಲ ಕೊಡಿಸುತ್ತೇವೆ ಎನ್ನುತ್ತಿದ್ದರು.
ಈ ನಾಜೂಕಿನ ಮಾತಿಗೆ ಮರುಳಾದ ಗ್ರಾಹಕರಿಗೆ ಶೇ.1ರಷ್ಟುಕಮಿಷನ್ ನೀಡಬೇಕು ಎಂದು ಷರತ್ತು ವಿಧಿಸುತ್ತಿದ್ದರು. ಬಳಿಕ ಪಂಚತಾರ ಹೋಟೆಲ್‌ನಲ್ಲಿ ಫೈನಾನ್ಷಿಯರ್ ಭೇಟಿಗೆ ಸಮಯ ನಿಗದಿಪಡಿಸುತ್ತಿದ್ದರು. ಆಗ ಅಲ್ಲಿ ನಲ್ಲಕಣಿಯನ್ನು ಫೈನಾನ್ಸಿಯರ್ ಎಂದು ಪರಿಚಯಿಸುತ್ತಿದ್ದರು. ಈ ಭೇಟಿ ವೇಳೆ ಪಿಚ್ಚಿ ಮುತ್ತು, ಬ್ಯಾಗ್‌ನಲ್ಲಿ ಖೋಟಾ ನೋಟುಗಳನ್ನು ಅಸಲಿ ಹಣ ಎನ್ನುವಂತೆ ಹಣ ತುಂಬಿಕೊಂಡು ತಂದು ನೀವು ಕೊಡಿಸಿದ್ದ .100 ಕೋಟಿ ಸಾಲಕ್ಕೆ ಶೇ.1ರಷ್ಟುಕಮಿಷನ್ ಎಂದು ತೋರಿಸುತ್ತಿದ್ದ. ಇದರಿಂದ ಫೈನಾನ್ಷಿಯರ್ ಭೇಟಿಗೆ ಬಂದ ಗ್ರಾಹಕರಿಗೆ ತಮ್ಮ ಮೇಲೆ ನಂಬಿಕೆ ಬರುವಂತೆ ಪ್ರಭಾವ ಬೀರುವುದು ಆರೋಪಿಗಳು ತಂತ್ರವಾಗಿತ್ತು. ಈ ರೀತಿ ಬಲೆಗೆ ಬಿದ್ದ ಜನರಿಗೆ ಖೋಟಾ ನೋಟು ತೋರಿಸಿ ವಂಚಿಸುತ್ತಿದ್ದರು. ಅಲ್ಲದೆ ಕೆಲವು ಬಾರಿ .1 ಕೋಟಿ ಮೌಲ್ಯದ ಖೋಟಾ ನೋಟಿಗೆ .10 ಲಕ್ಷ ಅಸಲಿ ನೋಟು ಡೀಲ್ ಕುದುರಿಸಿ ವಂಚಿಸುತ್ತಿದ್ದರು.
ಕರ್ನಾಟಕದಲ್ಲೇ ಅತಿಹೆಚ್ಚು 2000 ರೂ. ನಕಲಿ ನೋಟು ಪತ್ತೆ!
2 ಅಗ್ರಿಮೆಂಟ್ ಮಾಡಿಸಿ ವಂಚನೆ
ಸಾಲ ಬಯಸಿದ ಗ್ರಾಹಕರ ಜತೆ 3-4 ಬಾರಿ ಸಭೆ ಮಾಡಿ ಡೀಲ್ ಕುದುರಿಸುತ್ತಿದ್ದರು. ಬಳಿಕ ಒಪ್ಪಂದ ಸಲುವಾಗಿ ಉಪ ನೊಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ಅಗ್ರಿಮೆಂಟ್ ಶುಲ್ಕ ಎಂದು ಶೇ.1ರಷ್ಟುನಗದು ರೂಪದಲ್ಲಿ ಜನರಿಂದಲೇ ಹಣ ಪಡೆಯುತ್ತಿದ್ದರು. ಬಳಿಕ ಸಾಲ ಮಂಜೂರಾಗಿರುವ ಬಗ್ಗೆ ಒಂದು ಅಗ್ರಿಮೆಂಟ್ ಪತ್ರವನ್ನು ಅದರ ಜೊತೆಗೆ ಗುಪ್ತವಾಗಿ ಈಗಾಗಲೇ ಕೈ ಸಾಲ ಪಡೆದುಕೊಂಡಿರುವುದಾಗಿ ಮತ್ತೊಂದು ಅಗ್ರಿಮೆಂಟ್ ಪತ್ರ ತಯಾರಿಸುತ್ತಿದ್ದರು. ನಂತರ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಎರಡು ಅಗ್ರಿಮೆಂಟ್ ಪತ್ರಗಳಿಗೆ ಗ್ರಾಹಕರಿಂದ ಸಹಿ ಮಾಡಿಸುತ್ತಿದ್ದರು. ಸಾಲಕ್ಕೆ ಒತ್ತಡ ಹಾಕಿದಾಗ ನೀವು ಈಗಾಗಲೇ ನಮ್ಮಿಂದ ಸಾಲ ಪಡೆದು ಸಹಿ ಮಾಡಿಕೊಟ್ಟಿರುವ ಪತ್ರವಿದೆ ಎಂದು ಹೇಳಿ ಸಾಲ ಮರಳಿಸುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.