ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಶಾಲಾ ಆಡಳಿತ ಮಂಡಳಿಯ ದೂರಿನ ಮೇರೆಗೆ, ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಚಿತ್ರದುರ್ಗ (ಫೆ.3): ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಪ್ರತಿಷ್ಠಿತ ಮಠವೊಂದಕ್ಕೆ ಸೇರಿದ ಖಾಸಗಿ ಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾಬುದ್ಧಿ ಕಲಿಸಬೇಕಾದ ಶಿಕ್ಷಕನೇ ಕಾಮಪಿಶಾಚಿಯಂತೆ ವರ್ತಿಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯಾರ್ಥಿನಿಯರನ್ನ ಪ್ರತ್ಯೇಕ ಕೋಣೆಗೆ ಕರೆದು ದುಷ್ಕೃತ್ಯ

ಆರೋಪಿ ಶಿಕ್ಷಕ ರಂಗಣ್ಣ ಎಂಬುವವನು ಶಾಲೆಯ ಸುಮಾರು 6 ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೋಣೆಗೆ ಬರುವಂತೆ ಸೂಚಿಸಿ, ಅಲ್ಲಿ ಅವರಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಷಯ ತಿಳಿದು ಆಘಾತಕ್ಕೊಳಗಾದ ಶಾಲಾ ಆಡಳಿತ ಮಂಡಳಿಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಿದೆ.

ಆಡಳಿತ ಮಂಡಳಿಯಿಂದಲೇ ದೂರು

ಶಾಲೆಯ ಆಡಳಿತ ಸಮಿತಿಯು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಭರಮಸಾಗರ ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕ ರಂಗಣ್ಣನ ವಿರುದ್ಧ ಅಧಿಕೃತವಾಗಿ ದೂರು ನೀಡಿದೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಬಂಧಿತ ಶಿಕ್ಷಕನ ವಿರುದ್ಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರತಿಷ್ಠಿತ ಸಂಸ್ಥೆಯಲ್ಲೇ ಇಂತಹ ಘಟನೆ ನಡೆದಿರುವುದು ಚಿತ್ರದುರ್ಗದ ಜನರು ಬೆಚ್ಚಿಬಿದ್ದಿದ್ದಾರೆ. ಶಿಕ್ಷಕರೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ಒಂದು ಕಾಲದಲ್ಲಿ ಮಕ್ಕಳು ಶಾಲೆಗೆ ಹೋದರೆ ಸುರಕ್ಷಿತರಾಗಿರುತ್ತಾರೆ ಎಂಬ ಭಾವನೆಯಿತ್ತು. ಆದರೆ ಇತ್ತೀಚೆಗೆ ದಿನ ಬೆಳಗಾದರೆ ಶಾಲಾ ಮಕ್ಕಳ ಮೇಲೆ ಶಿಕ್ಷಕರೇ ಎಸಗುತ್ತಿರುವ ಪೈಶಾಚಿಕ ಕೃತ್ಯಗಳು ಪೋಷಕರಿಗೆ ಆಘಾತವುಂಟುಮಾಡಿದವೆ.