Asianet Suvarna News Asianet Suvarna News

ಮುರುಘಾ ಶ್ರೀ ವಿರುದ್ಧ ಪಿತೂರಿ: ಸೌಭಾಗ್ಯ ಬಸವರಾಜನ್‌ ಪೊಲೀಸರ ವಶಕ್ಕೆ

ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ಪತ್ನಿ ಸೌಭಾಗ್ಯ ಬಸವರಾಜನ್‌ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ. 

Chitradurga conspiracy case against Muruga seer Saubhagya Basavarajan Arrested gvd
Author
First Published Dec 16, 2022, 8:48 AM IST

ಚಿತ್ರದುರ್ಗ (ಡಿ.16): ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ಪತ್ನಿ ಸೌಭಾಗ್ಯ ಬಸವರಾಜನ್‌ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಬಸವರಾಜನ್‌ ಹಾಗೂ ಸೌಭಾಗ್ಯ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ನ.9 ರಂದು ದೂರು ದಾಖಲಾಗಿದ್ದು, ಮರುದಿನ ಅಂದರೆ ನ.10 ರಂದು ಬಸವರಾಜನ್‌ ಅವರನ್ನು ಬಂಧಿಸಲಾಗಿತ್ತು. ಆದರೆ, ಸೌಭಾಗ್ಯ ತಲೆ ಮರೆಸಿಕೊಂಡಿದ್ದರು. 

ದಾವಣಗೆರೆಯಲ್ಲಿ ತಡರಾತ್ರಿ ಸೌಭಾಗ್ಯ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಶುಕ್ರವಾರ ಬಂಧಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಸೌಭಾಗ್ಯ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸಲು ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿ ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಶ್ರೀ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅದರಂತೆ ಈ ಬಂಧನ ನಡೆದಿದೆ. ಈ ನಡುವೆ ಸೌಭಾಗ್ಯ ಬಸವರಾಜನ್‌ ಅವರು ನಿರೀಕ್ಷಣಾ ಜಾಮೀನಿಗೆ ಚಿತ್ರದುರ್ಗ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.

ಮುರುಘಾ ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಶ್ರೀಗಳಿಗೆ ಕೋರ್ಟ್ ಆದೇಶ

ಎಸ್‌.ಕೆ. ಬಸವರಾಜನ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ: ಮುರುಘಾಶ್ರೀ ಮೇಲೆ ಪೋಕ್ಸೊ ಪ್ರಕರಣ ದಾಖಲು ಮಾಡಿಸುವಲ್ಲಿ ಪಿತೂರಿ ನಡೆಸಿದರು ಎಂಬ ಆರೋಪ ಹೊತ್ತು ಚಿತ್ರದುರ್ಗ ಬಂಧಿಖಾನೆಯಲ್ಲಿರುವ ಮಾಜಿ ಶಾಸಕ ಹಾಗೂ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯ ಆದೇಶಿಸಿದೆ. ನ್ಯಾಯಾಂಗ ಬಂಧನದ ಗಡುವು ಮುಕ್ತಾಯವಾದ ಹಿನ್ನಲೆ ಬಸವರಾಜನ್‌ ಅವರನ್ನು ಸೋಮವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. 

ಬಸವರಾಜನ್‌ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿರುವುದರಿಂದ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನ ವಿಸ್ತರಿಸಿ ಆದೇಶಿಸಿದ್ದಾರೆ. ಡಿ. 26 ರವರೆಗೆ ಬಂಧನದ ಆವಧಿ ವಿಸ್ತರಿಸಲಾಗಿದೆ. ಏತನ್ಮಧ್ಯೆ ಪ್ರಕರಣದ ಮತ್ತೋರ್ವ ಆರೋಪಿ ಬಸವರಾಜನ್‌ ಪತ್ನಿ ಸೌಭಾಗ್ಯ ಬಸವರಾಜನ್‌ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮುರುಘಾಶ್ರೀ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಲು ಪಿತೂರಿ ನಡೆಸಿದ ಆರೋಪ ಹೊತ್ತಿರುವ ಬಸವರಾಜನ್‌ ಅವರನ್ನು ಸೋಮವಾರ ನ್ಯಾಯಾಲಯದಿಂದ ಮರಳಿ ಚಿತ್ರದುರ್ಗ ಬಂಧಿಖಾನೆಗೆ ಕರೆದೊಯ್ಯಲಾಯಿತು.

ಮನೆಗೆ ಕಳಿಸಿದ್ರೂ ಮರಳಿ ವಾಪಸ್ಸು ಬಂದ ಸಂತ್ರಸ್ತೆ: ಮುರುಘಾಶ್ರೀ ಮೇಲಿನ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಮಂದಿರದಿಂದ ಪೋಷಕರ ಜೊತೆ ಮನೆಗೆ ತೆರಳಿದ್ದ ಓರ್ವ ಸಂತ್ರಸ್ತೆ ಕೇವಲ ಅರ್ಧ ಗಂಟೆ ಅವಧಿಯಲ್ಲಿಯೇ ವಾಪಾಸ್ಸಾಗಿದ್ದಾಳೆ. ಮುರುಘಾ ಶರಣರ ಮೇಲೆ ಕಳೆದ ಆಗಸ್ಟ್‌ 26 ರಂದು ಪ್ರಕರಣ ದಾಖಲಾದ ನಂತರ ಸಂತ್ರಸ್ತೆ ಚಿತ್ರದುರ್ಗದ ಬಾಲ ಮಂದಿರದಲ್ಲಿ ಇದ್ದಳು. ಬಾಲ ಮಂದಿರದಿಂದ ಪೋಷಕರ ಬಳಿಗೆ ಕಳಿಸಿಕೊಡಲು ಗುರುವಾರವಷ್ಟೇ ತೀರ್ಮಾನವಾಗಿದ್ದು, ಅದರಂತೆ ಸಂಜೆ ಸಂತ್ರಸ್ತೆಯರು ಪೋಷಕರ ಜೊತೆ ಮನೆಗೆ ತೆರಳಿದ್ದರು.

ಮುರುಘಾ ಶ್ರೀ ರೇಪ್‌ ಕೇಸ್ ಸಂತ್ರಸ್ತ ಬಾಲಕಿಯ ಆಡಿಯೋ ವೈರಲ್: ಸಂಭಾಷಣೆ ವಿವರ ಇಲ್ಲಿದೆ

ಓರ್ವ ಸಂತ್ರಸ್ತೆ ಅರ್ಧಗಂಟೆಯೊಳಗೆ ಮನೆಯಿಂದ ವಾಪಸ್‌ ಬಂದು ಎಸ್ಕೆ ಬಸವರಾಜನ್‌ ಪತ್ನಿ ಸೌಭಾಗ್ಯ ಬಸವರಾಜನ್‌ ಅವರನ್ನು ಭೇಟಿಯಾಗಿದ್ದಾಳೆ. ಬಾಲಕಿ ತನ್ನ ಮನೆಯಲ್ಲಿರಲು ನಿರಾಕರಿಸಿದ ಹಿನ್ನಲೆ ಸೌಭಾಗ್ಯ ಬಸವರಾಜನ್‌ ಆಕೆಯನ್ನು ಮಹಿಳಾ ಠಾಣೆಗೆ ಕರೆತಂದು ಒಪ್ಪಿಸಿದ್ದಾರೆ. ವಿಚಾರಣೆ ನಂತರ ಪೊಲೀಸರು ರಾತ್ರಿ ಹನ್ನೊಂದರ ವೇಳೆಗೆ ಸಂತ್ರಸ್ತೆಯನ್ನು ಮರಳಿ ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.

Follow Us:
Download App:
  • android
  • ios