ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋಳಿ ಕಂಪನಿಯೊಂದು ರೈತರಿಂದ ಕೋಳಿ ಖರೀದಿಸಿ ಹಣ ಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿದೆ. ನೂರಕ್ಕೂ ಹೆಚ್ಚು ರೈತರು 2 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿದೆ.

ಚಿಕ್ಕಮಗಳೂರು (ಜುಲೈ.14): ಕೋಳಿ ಕಂಪನಿಯೊಂದು ಹಣ ಕೊಡುವುದಾಗಿ ನಂಬಿಸಿ ರೈತರಿಂದ ಕೋಳಿ ಕೊಂಡೊಯ್ದು ಹಣ ಕೊಡದೇ ನೂರಾರು ರೈತರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಡೂರು, ತರೀಕೆರೆ, ಮತ್ತು ಅರಸೀಕೆರೆ ತಾಲೂಕುಗಳ ನೂರಾರು ಕೋಳಿ ಸಾಕಾಣಿಕೆದಾರ ರೈತರಿಗೆ ಕಂಪನಿ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ.

ಕಳೆದ ಒಂದೂವರೆ ಎರಡು ವರ್ಷಗಳಿಂದ ಸಾಕಿದ ಕೋಳಿಗಳನ್ನು ಕೊಂಡುಕೊಂಡು ಹಣ ಪಾವತಿಸದೆ ಕಂಪನಿಯು ರೈತರನ್ನು ವಂಚಿಸಿದೆ ಈ ಮೋಸದಿಂದ ಸುಮಾರು 100ಕ್ಕೂ ಹೆಚ್ಚು ರೈತರು 2 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹಣ ವಂಚನೆಯಿಂದಾಗಿ ಕಂಗಾಲಾಗಿದ್ದಾರೆ.

ನೊಂದ ರೈತರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮತ್ತು ಉಪವಿಭಾಗಾಧಿಕಾರಿ (ಡಿಸಿ) ಅವರಿಗೆ ದೂರು ಸಲ್ಲಿಸಿದ್ದಾರೆ. ಕಂಪನಿಯು ಕೋಳಿಗಳನ್ನು ಕೊಂಡುಕೊಂಡು, ರೈತರಿಗೆ ಭರವಸೆ ನೀಡಿದ ಹಣವನ್ನು ಪಾವತಿಸದೆ ವಂಚಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರೈತರು ತಮ್ಮ ಜೀವನೋಪಾಯಕ್ಕಾಗಿ ಕೋಳಿ ಸಾಕಾಣಿಕೆಗೆ ಹೂಡಿಕೆ ಮಾಡಿದ್ದರು, ಆದರೆ ಕಂಪನಿಯ ವಂಚನೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೂರುದಾರರ ಪ್ರಕಾರ, ಕಂಪನಿಯು ಆರಂಭದಲ್ಲಿ ಒಪ್ಪಂದದಂತೆ ಕೋಳಿಗಳನ್ನು ಖರೀದಿಸಿದರೂ ನಂತರ ಹಣ ಪಾವತಿ ಮಾಡಿಲ್ಲ. ಈ ಈ ವಂಚನೆಯಿಂದ ರೈತರಿಗೆ ಭಾರೀ ನಷ್ಟವಾಗಿದ್ದು, ಕೆಲವರು ಸಾಲದ ಸುಳಿಗೆ ಸಿಲುಕಿದ್ದಾರೆ. ರೈತರು ತಕ್ಷಣವೇ ಕಂಪನಿಯಿಂದ ಹಣ ಪಾವತಿಸುವಂತೆ ಮತ್ತು ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಎಸ್ಪಿ ಮತ್ತು ಡಿಸಿಗೆ ಮನವಿ ಮಾಡಿದ್ದಾರೆ.

ಈ ಘಟನೆಯು ರೈತ ಸಮುದಾಯದಲ್ಲಿ ಆಕ್ರೋಶವನ್ನುಂಟುಮಾಡಿದ್ದು, ತನಿಖೆಗೆ ಒತ್ತಾಯಿಸಲಾಗಿದೆ. ಜಿಲ್ಲಾಡಳಿತವು ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ರೈತರ ಹಣವನ್ನ ಕೋಳಿ ಕಂಪನಿಯಿಂದ ವಸೂಲಿ ಮಾಡುತ್ತದೆಯಾ ಕಾದು ನೋಡಬೇಕು.