Chikkamagaluru provocative post case: ಚಿಕ್ಕಮಗಳೂರಿನಲ್ಲಿ ಗೋಹತ್ಯೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ, 'ಗೋ ಹಂತಕರೆದೆಯ ಸೀಳಿರಿ' ಎಂಬ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಮಗಳೂರು,(ಅ.16): ಗೋಹತ್ಯೆಯ ವಿರುದ್ಧ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪ ಹಿನ್ನೆಲೆ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ಹಿಂದೂಗಳೇ ಒಂದಾಗಿ ಬನ್ನಿ.. ಪ್ರಚೋದನಕಾರಿ ಪೋಸ್ಟ್
ನಿನ್ನೆ ನಗರದಲ್ಲಿ ಹಿಂದೂ ಕಾರ್ಯಕರ್ತರು ಗೋಹತ್ಯೆಯನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಗೆ ಕರೆ ನೀಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿತ್ತು. ಈ ಪೋಸ್ಟ್‌ನಲ್ಲಿ ಖಡ್ಗದ ಚಿತ್ರವನ್ನು ಬಳಸಿ, ಬಲಿಗೆ ಹಸಿದಿಹ ಶಸ್ತ್ರ,ಹಿರಿಯುತ ಗೋ ಹಂತಕರೆದೆಯ ಸೀಳಿರಿ' ಗೋಮಾತೆ ರಕ್ಷಣೆಗೆ ಹಿಂದುಗಳೇ ಒಂದಾಗಿ ಬನ್ನಿ ಎಂದು ಕರೆ ನೀಡಲಾಗಿತ್ತು.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಪ್ರಕರಣ: ಆರೋಪಿ ದಾನಪ್ಪ ನರೋಣಿ 9 ದಿನ ಪೊಲೀಸ್ ಕಸ್ಟಡಿಗೆ
ಬಿಜೆಪಿ ಸಂಘಪರಿವಾದ ಮುಖಂಡರ ವಿರುದ್ಧ ಕೇಸ್:
ಇದು ಸಾಮುದಾಯಿಕ ಘರ್ಷಣೆಗೆ ಕಾರಣವಾಗುವ ಪ್ರಚೋದನಕಾರಿ ಪೋಸ್ಟ್ ಎಂದು ಆರೋಪಿಸಿ ಪೊಲೀಸರು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂತೋಷ್, ಹಾಸನ ವಿಭಾಗದ ಭಜರಂಗದಳ ಸಹ-ಸಂಚಾಲಕ ಶಾಮ್ ಸೇರಿದಂತೆ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಜಿಲ್ಲೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.


