ನಗರದ ವಿಜಯಪುರ ಬಡಾವಣೆಯಲ್ಲಿ ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದ ಘಟನೆ ನಡೆದಿದೆ. ಹಸುವಿನ ಬಾಲಕ್ಕೆ ಸೆಂಟ್ ಸ್ಪ್ರೇ ಮಾಡಿ ಲೈಟರ್‌ನಿಂದ ಬೆಂಕಿ ಹಚ್ಚಿದ 16 ವರ್ಷದ ಬಾಲಕನ ಕೃತ್ಯ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಚಿಕ್ಕಮಗಳೂರು (ಅ.06): ನಗರದ ವಿಜಯಪುರ ಬಡಾವಣೆಯಲ್ಲಿ ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದ ಘಟನೆ ನಡೆದಿದೆ. ಹಸುವಿನ ಬಾಲಕ್ಕೆ ಸೆಂಟ್ ಸ್ಪ್ರೇ ಮಾಡಿ ಲೈಟರ್‌ನಿಂದ ಬೆಂಕಿ ಹಚ್ಚಿದ 16 ವರ್ಷದ ಬಾಲಕನ ಕೃತ್ಯ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಸಂಜೆಯ ವೇಳೆ ರಸ್ತೆಯಲ್ಲಿ ಹಸು ನಿಂತಿದ್ದಾಗ, ಅಪ್ರಾಪ್ತ ಬಾಲಕ ತನ್ನ ಕೈಯಲ್ಲಿದ್ದ ಸೆಂಟ್ ಸ್ಪ್ರೇಯನ್ನು ಹಸುವಿನ ಬಾಲಕ್ಕೆ ಹೊಡೆದು ಬೆಂಕಿ ಹಚ್ಚಿದ್ದಾನೆ. ಈ ದೃಶ್ಯ ಕಂಡ ಸ್ಥಳೀಯರು ತಕ್ಷಣ ಬಾಲಕನನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಾಲಕನ ಹುಚ್ಚಾಟಕ್ಕೆ ಕೋಪಗೊಂಡು ಆತನಿಗೆ ಥಳಿಸಿರುವ ಆರೋಪ ಕೇಳಿ ಬಂದಿದೆ.
ಘಟನೆ ಬಗ್ಗೆ ಮಾಹಿತಿ ದೊರೆತ ಬಸವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಹಸುವಿಗೆ ಬೆಂಕಿ ಹಚ್ಚಿದ ಕುರಿತು ಬಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ, ಬಾಲಕನ ತಾಯಿ ಶಬನಾ ಬಾನು ತನ್ನ ಮಗನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂದು ಪ್ರತಿದೂರು ನೀಡಿದ್ದು ಎರಡು ಕಡೆ ಅವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಕ್ಕಾ ಕಾಬಾ ಮೇಲೆ ಉ.ಪ್ರ. ಸಿಎಂ, ಪ್ರಧಾನಿ ಎಡಿಟ್ ಫೋಟೋ: ಬಂಧನ
ಕಲಬುರಗಿ: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಕಾಬಾ ಮೇಲೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರು ಭಗವಾಧ್ವಜ ಹಿಡಿದು ನಿಂತಿರುವಂತೆ ಎಡಿಟ್ ಮಾಡಿದ ಫೊಟೋವೊಂದನ್ನು ವೈರಲ್ ಮಾಡಿದ ಸಂಬಂಧ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜೇವರ್ಗಿಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಆನಂದ ಗುತ್ತೇದಾರ್ ಬಂಧಿತ.
ಯುವಕ ಆನಂದ ಗುತ್ತೇದಾರ್, ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಬಾ ಮೇಲೆ ಭಗವಾಧ್ವಜ ಹಿಡಿದಿರುವ ನರೇಂದ್ರ ಮೋದಿ, ಆದಿತ್ಯನಾಥ್ ಫೋಟೋವನ್ನು ಎಡಿಟ್ ಮಾಡಿ ವಿಕೃತಿ ಮೆರೆದಿದ್ದ. ಈ ಸಂಬಂಧ ಸಯ್ಯದ್ ಪಟೇಲ್ ಜೇವರ್ಗಿ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಶನಿವಾರ ರಾತ್ರಿ ಜೇವರ್ಗಿ ಠಾಣೆ ಮುಂದೆ ಒಂದು ಕೋಮಿನ ಯುವಕರು ಜಮಾಯಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದರಿಂದಾಗಿ ಜೇವರ್ಗಿಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಬಳಿಕ, ಪೊಲೀಸರು ಆನಂದ ಗುತ್ತೇದಾರ್‌ನನ್ನು ಬಂಧಿಸಿದ್ದಾರೆ.
