ಚೆನ್ನೈ: ದಂಪತಿ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಎಸ್ಕೇಪಾಗಿದ್ದ ಮನೆಕೆಲಸದವ ಅರೆಸ್ಟ್
ಅಮೆರಿಕದಲ್ಲಿ ನೆಲೆಸಿರುವ ದಂಪತಿಯ ಮಗಳು ಪೋಷಕರೊಂದಿಗೆ ಮಾತನಾಡಲು ಸಾಧ್ಯವಾಗದಿದ್ದಾಗ, ಸ್ಥಳೀಯ ಸಂಬಂಧಿಕರಿಗೆ ತಿಳಿಸಿದ್ದಾಳೆ. ಈ ಘಟನೆ ಬೆಳಕಿಗೆ ಬಂದಿದೆ.
ಚೆನ್ನೈ (ಮೇ. 08): ಅಮೆರಿಕದಿಂದ ವಾಪಸಾಗಿದ್ದ ದಂಪತಿಯನ್ನು ಅವರ ಜೊತೆಯಲ್ಲಿಯೇ ಇದ್ದ ಮನೆಕೆಲಸಗಾರನೊಬ್ಬ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ದಂಪತಿಯಿಂದ ಲೂಟಿ ಮಾಡಿದ್ದ ಒಂಬತ್ತು ಕೆಜಿ ಚಿನ್ನಾಭರಣ ಸೇರಿದಂತೆ ₹5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಯನ್ನು 60 ವರ್ಷದ ಶ್ರೀಕಾಂತ್ ಮತ್ತು ಅವರ 55 ವರ್ಷದ ಪತ್ನಿ ಅನುರಾಧ ಎಂದು ಗುರುತಿಸಲಾಗಿದೆ. ಶ್ರೀಕಾಂತ್ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು.
ದಂಪತಿಯನ್ನು ಆರೋಪಿ ಅವರ ಮನೆಯಲ್ಲಿಯೇ ಘೋರ ರೀತಿಯಲ್ಲಿ ಕೊಂದು, ಚೆನ್ನೈನ ಹೊರಗಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಶವಗಳನ್ನು ಹೂತಿಟ್ಟಿದ್ದಾನೆ. ನೇಪಾಳದಲ್ಲಿರುವ ತಮ್ಮ ಊರಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಅವನನ್ನು ಮತ್ತು ಆಂಧ್ರಪ್ರದೇಶದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ದಂಪತಿಯ ಮಗಳು ಪೋಷಕರಿಗೆ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ಥಳೀಯ ಸಂಬಂಧಿಕರಿಗೆ ತಿಳಿಸಿದ್ದಾಳೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಆಂಧ್ರಪ್ರದೇಶದ ಒಂಗೋಲ್‌ನಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳು, ಮನೆಗೆಲಸದ ಸಹಾಯಕ ಕೃಷ್ಣನ್ ಮತ್ತು ಅವರ ಸ್ನೇಹಿತ ರವಿಯನ್ನು ಆಂಧ್ರಪ್ರದೇಶದ ಒಂಗೋಲ್‌ನಿಂದ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪ್ರೇಯಸಿಯನ್ನು ಭಯಾನಕವಾಗಿ ಕೊಂದ ಪಾಗಲ್ ಪ್ರೇಮಿ, ಕ್ರೈಂ ಸೀನ್ ನೋಡಿ ಬೆಚ್ಚಿ ಬಿದ್ದ ಪೊಲೀಸರು!
ದೇಶ ಬಿಡುವ ಮುನ್ನ ಅವರನ್ನು ಹಿಡಿಯಲು ಪೊಲೀಸರು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸಿದ್ದರು. "ಆರೋಪಿಗಳು ಒಯ್ದಿದ್ದ ಸಿಸಿಟಿವಿ ರೆಕಾರ್ಡರ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ನಾವು ಪಡೆದುಕೊಂಡಿದ್ದೇವೆ. ನಮ್ಮಲ್ಲಿ ಶಿಕ್ಷೆಗೆ ಬಲವಾದ ಪ್ರಕರಣವಿದೆ" ಎಂದು ಚೆನ್ನೈ ಪೊಲೀಸ್‌ನ ಹಿರಿಯ ಅಧಿಕಾರಿ ಡಾ ಕಣ್ಣನ್ ಹೇಳಿದ್ದಾರೆ.
ಇತ್ತೀಚಿನ ರಿಯಲ್ ಎಸ್ಟೇಟ್ ವ್ಯವಹಾರದಿಂದ ದಂಪತಿಗಳು ತಮ್ಮ ಮನೆಯಲ್ಲಿ ₹40 ಕೋಟಿ ನಗದು ಹೊಂದಿದ್ದಾರೆ ಎಂದು ಕೃಷ್ಣನ್ ನಂಬಿದ್ದರು ಮತ್ತು ಅದನ್ನು ದರೋಡೆ ಮಾಡಲು ಸಿದ್ಧತೆ ನಡೆಸಿದ್ದರು. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆಗಾಗಿ ಪೊಲೀಸರು ಶವಗಳನ್ನು ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.