Bengaluru: ಡ್ಯಾಗರ್, ಚಾಕು ಹಿಡಿದು ಸೆಲಬ್ರೇಷನ್: ಸ್ಥಳೀಯರು ಪ್ರಶ್ನಿಸಿದ್ರೆ ಬೀಳುತ್ತೆ ಗೂಸಾ..!
ಬೆಂಗಳೂರಿನಲ್ಲಿ 20 - 30 ಜನ ಪುಂಡ ಯುವಕರು ನಡು ರಸ್ತೆಯಲ್ಲಿ ಕೈಯಲ್ಲಿ ಮಾರಣಾಂತಿಕ ಡ್ಯಾಗರ್, ಚಾಕುವನ್ನ ಹಿಡಿದು ಕುಣಿದಾಡಿದ್ದಾರೆ. ಬಿಯರ್ ಬಾಟಲಿಯನ್ನು ಸಹ ಇವರು ಹಿಡಿದುಕೊಂಡಿದ್ದು, ಇಂತಹ ಆಚರಣೆಗಳನ್ನು ಜನರನ್ನು ಪ್ರಶ್ನಿಸಲು ಸಹ ಭಯ ಪಡುವಂತಾಗಿದೆ. ಈ ಕುರಿತು ವಿವರ ಇಲ್ಲಿದೆ..
ಬೆಂಗಳೂರು ನಗರದಲ್ಲಿ ಸಮರ್ಥ ಪೊಲೀಸ್ ವ್ಯವಸ್ಥೆ ಇದೆ - ಹಾಗಂತ ಪೊಲೀಸ್ ಇಲಾಖೆ ಹೇಳಿಕೊಂಡೇ ಬಂದಿದೆ . ಆದ್ರೆ ನಿಜಕ್ಕೂ ಇಂತಹ ಘಟನೆಗಳು ನಡೆದಾಗ ಸಹಜವಾಗಿಯೇ ಇಲಾಖೆ ಅಷ್ಟು ಸಮರ್ಥವಾಗಿದ್ಯಾ ಎಂಬ ಅನುಮಾನ ಮೂಡುತ್ತೆ. ಪ್ರತಿ 15 - 20 ನಿಮಿಷಕ್ಕೆ ಹೊಯ್ಸಳ ಬೀಟ್ ವಾಹನ ಬರಬೇಕು. ಅದರಲ್ಲೂ ಕೆಲವೊಂದು ಅಡ್ಡೆಗಳಿದ್ದು, ಆ ಜಾಗದಲ್ಲಿ ಪೊಲೀಸರು ಇರಲೇಬೇಕು. ಇಲ್ಲದಿದ್ದರೆ ರೋಗಗ್ರಸ್ಥ ಕ್ರಿಮಿನಲ್‌ಗಳು ಈ ರೀತಿ ಅಟ್ಟಹಾಸ ಮೆರೆಯುತ್ತಾರೆ. ಹೌದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅದೇ..
ಏರಿಯಾದಲ್ಲಿ ಯಾರಾದ್ರು ಸ್ವಲ್ಪ ಕುಖ್ಯಾತಿ ಪಡೆದ ರೌಡಿ ಇದ್ದರೆ ಮುಗೀತು. ಅವನ ಹೆಸರೇ ಸಾಕು ಅಲ್ಲಿದ್ದಂತಹ ಕೆಲ ಪುಡಿ ರೌಡಿಗಳಿಗೆ ಧೈರ್ಯ ಬಂದು ಬಿಡುತ್ತೆ. ಆತನ ಜೊತೆ ಸೇರಿಕೊಂಡು ಅವನ ರೌಡಿ ಪಟಾಲಂರನ್ನ ಓಲೈಸಿಕೊಂಡು ಏರಿಯಾದಲ್ಲಿ ತಮ್ಮದೇ ರಾಜ್ಯ ಭಾರ ಎಂಬಂತೆ ಮೆರೆದುಬಿಡ್ತಾರೆ. ಇಲ್ಲಿ ಆಗಿದ್ದೂ ಅದೇ. ಸುಮಾರು 20 - 30 ಜನ ಪುಂಡ ಯುವಕರು ನಡು ರಸ್ತೆಯಲ್ಲಿ, ಅದೂ ಕೈಯಲ್ಲಿ ಮಾರಣಾಂತಿಕ ಡ್ಯಾಗರ್,ಚಾಕುವನ್ನ ಹಿಡಿದು ನರ್ತಿಸ್ತಾರೆ ಅಂದ್ರೆ ಅಲ್ಲಿನ ಪೊಲೀಸರು ಲಾ ಅಂಡ್ ಆರ್ಡರ್ ಅನ್ನ ಎಷ್ಟರ ಮಟ್ಟಿಗೆ ಮೇಂಟೇನ್ ಮಾಡ್ತಿದ್ದಾರೆ ಎಂದು ಗೊತ್ತಾಗಿ ಬಿಡುತ್ತೆ.
ಇದನ್ನು ಓದಿ: Mumbai: ನಿಮ್ಮ ಮನೆಯಲ್ಲಿ ದೆವ್ವ ಇದೆ ಎಂದು ಹೇಳಿ 15 ಲಕ್ಷ ಲೂಟಿ ಮಾಡಿದ ಮನೆಗೆಲಸದಾಕೆ, ಮಹಿಳಾ ಮಾಂತ್ರಿಕ
ಒಂದು ಕೈಯಲ್ಲಿ ಬಿಯರ್ ಬಾಟಲ್, ಇನ್ನೊಂದು ಕೈಯಲ್ಲಿ ಡ್ಯಾಗರ್, ಅದರ ಜೊತೆಗೆ ಜೋರಾದ ತಮಟೆ ಸೌಂಡು. ಇದನ್ನ ನೋಡುತ್ತಿದ್ದ ಸ್ಥಳೀಯರ ಬಳಿ ಸೌಂಡೇ ಇಲ್ಲ. ಸ್ವಲ್ಪ ತುಟಿಕ್ ಪಿಟಿಕ್ ಎಂದರೆ ಮುಗೀತು. ನಶೆಯಲ್ಲಿರೋ ಹುಡುಗರು ಎಲ್ಲಿ ಕೈಯಲ್ಲಿದ್ದ ಡ್ಯಾಗರ್ ಅನ್ನ ನುಗ್ಗಿಸಿಬಿಡ್ತಾರೆನೋ ಎಂಬ ಭಯ. ಆ ಭಯದ ನಡುವೆ ಅಲ್ಲಿನ ಜನತೆ ಬದುಕು ಸಾಗಿಸ್ತಿದ್ದಾರೆ. ಅಷ್ಟರ ಮಟ್ಟಿಗೆ ಪುಟ್ಟೇನಹಳ್ಳಿ ಪೊಲೀಸರು ಕಾನೂನು ಸುವ್ಯವಸ್ಥೆಯನ್ನ ಸುಭದ್ರವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಇನ್ನು ಆರೇಳು ಇಂಚಿಗಿಂತಲು ಉದ್ದ ಇರುವ ವೆಪನ್ಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಆದ್ರೆ ಇಲ್ಲಿ ಅದಕ್ಕಿಂತ ಉದ್ದನೆಯ ಚಾಕುಗಳು, ಡ್ರ್ಯಾಗರ್ಗಳಿವೆ. ಅದೂ ಅಲ್ಲದೆ ಅದನ್ನ ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗ್ತಿದೆ. ಆದ್ರೆ ಇಲ್ಲಿಯವರೆಗೂ ಯಾವುದೇ ಕ್ರಮ ಮಾತ್ರ ಪೊಲೀಸರು ತೆಗೆದುಕೊಂಡಿಲ್ಲ. ಒಂದು ಸಂಭ್ರಮಾಚರಣೆಯನ್ನ ನಡೆಸುವ ಕ್ರಮವೇ ಬೇರೆ ಅದನ್ನ ಇಂತಹ ಪೂರ್ವಾಗ್ರಹ ಪೀಡಿತ ವ್ಯಕ್ತಿಗಳು ಸೆಲೆಬ್ರೇಷನ್ ಮಾಡಿದರೆ ಅದರ ರಿಸಲ್ಟ್ ಹೀಗೆ ಇರುತ್ತೆ. ಇನ್ನಾದರೂ ಇಂತಹ ಕ್ರಿಮಿನಲ್ಗಳನ್ನ ಪುಟ್ಟೇನಹಳ್ಳಿ ಪೊಲೀಸರು ಕಂಟ್ರೋಲ್ಗೆ ತೆಗೆದುಕೊಳ್ಳಬೇಕಿದೆ.
(ವರದಿ: ಕಿರಣ್. ಕೆ.ಎನ್., ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು)
ಇದನ್ನೂ ಓದಿ: ಲಿಫ್ಟ್ ಜೊತೆ ಆಟ ಬೇಡ : ಲಿಫ್ಟ್‌ನಲ್ಲಿ ಸಿಲುಕಿ ಟೀಚರ್ ಸಾವು