ಬೆಂಗಳೂರು(ಜೂ.19): ರಾಜ್ಯದಲ್ಲಿ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಬೆಂಗಳೂರಿನ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದ ಸಿಸಿಬಿ ತಂಡಕ್ಕೆ ತನಿಖೆ ವಹಿಸಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ನಿರ್ಧರಿಸಿದ್ದಾರೆ. 

ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 47, ಮಂಗಳೂರಿನಲ್ಲಿ 39, ಮೈಸೂರು, ಉಡುಪಿ ಸೇರಿದಂತೆ ಒಟ್ಟು 97 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಗುಜರಾತ್‌ ಹಾಗೂ ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕೂಡಾ ಪ್ರಕರಣಗಳಿವೆ. ಮೊದಲ ಹಂತದಲ್ಲಿ 2009ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಕುಖ್ಯಾತ ಪಾತಕಿ ದಾವೂದ್‌ ಇಬ್ರಾಹಿಂನ ‘ಡಿ’ ಕಂಪನಿ ಪರ ವಕೀಲ ನೌಷಾದ್‌ ಕೊಲೆ ಪ್ರಕರಣದ ತನಿಖೆ ಸಿಸಿಬಿ ಹೆಗಲಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನುಳಿದ ಪ್ರಕರಣಗಳನ್ನು ಸಿಸಿಬಿಗೆ ಹಸ್ತಾಂತರಿಸಲು ಡಿಜಿಪಿ ಪ್ರವೀಣ್‌ ಸೂದ್‌ ತೀರ್ಮಾನಿಸಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಆಪ್ತ ಸಿಸಿಬಿ ಬಲೆಗೆ

ಪೂಜಾರಿ ಬಂಧನ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಂದೀಪ್‌ ಪಾಟೀಲ್‌ ಅವರಿಗೆ, ಆತನ ಹಿನ್ನೆಲೆ ಕುರಿತು ಸಮಗ್ರ ಮಾಹಿತಿ ಇದೆ. ಅಲ್ಲದೆ, ಒಂದೇ ಸಂಸ್ಥೆಯಿಂದ ತನಿಖೆ ನಡೆದರೆ ಪತ್ತೆದಾರಿಕೆ ಶೀಘ್ರ ಮುಗಿಯಲಿದೆ. ಪೂಜಾರಿಗೆ ಭದ್ರತೆ ಕಲ್ಪಿಸಲು ಸಹ ಅನುಕೂಲವಾಗಲಿದೆ ಎಂಬುದು ಡಿಜಿಪಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ದಾಖಲಾಗಿದ್ದ 47 ಪ್ರಕರಣಗಳ ಬಗ್ಗೆ ಸಿಸಿಬಿ ತನಿಖೆ ನಡೆದಿದೆ. ಬೆಂಗಳೂರಿಗೆ ಮಾತ್ರ ಅಧಿಕಾರ ವ್ಯಾಪ್ತಿ ಹೊಂದಿದ್ದ ಸಿಸಿಬಿಗೆ ಪೂಜಾರಿ ಪ್ರಕರಣದಲ್ಲಿ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಮಂಗಳೂರಿನಲ್ಲಿ ದಾಖಲಾಗಿದ್ದ ನೌಷಾದ್‌ ಕೊಲೆ ಕೃತ್ಯವನ್ನು ಸಿಸಿಬಿ ತನಿಖೆ ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೂಜಾರಿ ವಿರುದ್ಧ ಸುದೀರ್ಘಾವಧಿ ತನಿಖೆ ನಡೆಸಬೇಕಿದೆ. ಹಳೆ ಪ್ರಕರಣಗಳಲ್ಲಿ ಆತನ ಕೆಲ ಸಹಚರರಿಗೆ ಶಿಕ್ಷೆಗೆ ಗುರಿಯಾಗಿದ್ದರೆ, ಕೆಲವರು ಸಾಕ್ಷ್ಯಧಾರಗಳ ಕೊರತೆಯಿಂದ ದೋಷಮುಕ್ತರಾಗಿದ್ದಾರೆ. ಅಲ್ಲದೆ, ಬಹುಪಾಲು ಪ್ರಕರಣಗಳ ತನಿಖಾಧಿಕಾರಿಗಳು ಕೂಡಾ ಬದಲಾಗಿದ್ದಾರೆ. ನಿವೃತ್ತಿ ಸಹ ಹೊಂದಿದ್ದಾರೆ. ಹೀಗಾಗಿ ಮತ್ತೆ ಪೂಜಾರಿ ವಿರುದ್ಧ ತನಿಖೆಗೆ ಸ್ಥಳೀಯ ಪೊಲೀಸರಿಗೆ ಸೂಚಿಸಿದರೆ, ತನಿಖೆಯ ಹಾದಿ ತಪ್ಪಬಹುದು. ಈ ಹಿನ್ನೆಲೆಯಲ್ಲಿ ಸಿಸಿಬಿ ತನಿಖೆ ಸೂಕ್ತವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾತಕಿ ರವಿ ಪೂಜಾರಿ ಜತೆ ಪ್ರಖ್ಯಾತ ಪೊಲೀಸ್ ಅಧಿಕಾರಿ ಸ್ನೇಹ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೂಜಾರಿ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ಆತನಿಗೆ ಜೀವ ಬೆದರಿಕೆ ಸಹ ಇದೆ. ಇದೊಂದು ಅತಿ ಸೂಕ್ಷ್ಮ ಪ್ರಕರಣವಾಗಿದ್ದು, ಆತನ ಪಾತಕ ಚರಿತ್ರೆ ಶೋಧಿಸಿದರೆ ದೇಶದ ಭದ್ರತೆಗೆ ಕುರಿತು ಸಹ ಮಹತ್ವದ ಸಂಗತಿಗಳು ಸಿಗಬಹುದು. ಆತನ ಜಾಲವು ವಿಸ್ತಾರವಾಗಿದೆ. ಇನ್ನು ಸ್ಥಳೀಯ ಪೊಲೀಸರಿಗೆ ಪ್ರಕರಣ ನಡೆದಾಗ ಬಿಸಿಯಲ್ಲಿ ಹುಮ್ಮಸ್ಸು ಇರುತ್ತದೆ. ಹಳೇ ಪ್ರಕರಣಗಳಿಗೆ ಮರು ಜೀವ ಕೊಟ್ಟು ತನಿಖೆ ನಡೆಸುವ ಹಿಂದಿನ ಹುಮ್ಮಸ್ಸು ನಿರೀಕ್ಷಿಸಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತನಗೆ ಜೀವ ಭೀತಿಯಿಂದ ಎಂದು ಪೂಜಾರಿ ನ್ಯಾಯಾಲಯದಲ್ಲೇ ಹೇಳಿಕೊಂಡಿದ್ದಾನೆ. ಅಪರಾಧ ತನಿಖೆ ಸಲುವಾಗಿ ಆತನನ್ನು ಕರೆದೊಯ್ಯುವಾಗ ಭದ್ರತೆಗೆ ಬಗ್ಗೆ ನಿಗಾವಹಿಸಬೇಕಿದೆ. ಒಂದೊಂದು ಪ್ರಕರಣಕ್ಕೆ ಒಂದೊಂದು ತಂಡ ನಿಯೋಜಿಸಿದರೆ ತೊಂದರೆ ಆಗಬಹುದು. ಅನಗತ್ಯವಾಗಿ ರಿಸ್ಕ್‌ ತೆಗೆದುಕೊಳ್ಳದೆ ಒಂದೇ ಸಂಸ್ಥೆಗೆ ತನಿಖೆ ವಹಿಸುವುದು ಸರಿಯಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.