ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಮಹಾರಾಷ್ಟ್ರದ ಮುಂಬೈ ಹಾಗೂ ಗೋವಾದಿಂದ ಬಸ್‌ಗಳಲ್ಲಿ ಡ್ರಗ್ಸ್‌ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಸಿಸಿಬಿಗೆ ಲಭಿಸಿತ್ತು. ಈ ಮಾಹಿತಿ ಆಧಾರದ ಮೇಲೆ ಜಂಟಿ ಆಯುಕ್ತ (ಅಪರಾಧ) ಡಾ.ಎಸ್‌.ಡಿ.ಶರಣಪ್ಪ ಅವರ ಸೂಚನೆ ಮೇರೆಗೆ 20ಕ್ಕೂ ಹೆಚ್ಚಿನ ಸಿಸಿಬಿ ಪೊಲೀಸರ ತಂಡ ಮುಂಜಾನೆ ನೆಲಮಂಗಲ ಟೋಲ್‌ ಬಳಿ ಬಸ್‌ ತಪಾಸಣೆ ನಡೆಸಿದರು.

ಬೆಂಗಳೂರು(ಸೆ.03): ಮಾದಕ ವಸ್ತು ಸಾಗಾಣಿಕೆ ಶಂಕೆ ಹಿನ್ನೆಲೆಯಲ್ಲಿ ನಗರ ಪ್ರವೇಶಿಸಿದ ಅಂತರ್‌ ರಾಜ್ಯ ಬಸ್‌ಗಳು ಸೇರಿದಂತೆ ಕೆಲ ವಾಹನಗಳನ್ನು ಶನಿವಾರ ಮುಂಜಾನೆ ಸಿಸಿಬಿ ಪೊಲೀಸರು ದಿಢೀರ್‌ ತಪಾಸಣೆ ನಡೆಸಿದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಮಹಾರಾಷ್ಟ್ರದ ಮುಂಬೈ ಹಾಗೂ ಗೋವಾದಿಂದ ಬಸ್‌ಗಳಲ್ಲಿ ಡ್ರಗ್ಸ್‌ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಸಿಸಿಬಿಗೆ ಲಭಿಸಿತ್ತು. ಈ ಮಾಹಿತಿ ಆಧಾರದ ಮೇಲೆ ಜಂಟಿ ಆಯುಕ್ತ (ಅಪರಾಧ) ಡಾ.ಎಸ್‌.ಡಿ.ಶರಣಪ್ಪ ಅವರ ಸೂಚನೆ ಮೇರೆಗೆ 20ಕ್ಕೂ ಹೆಚ್ಚಿನ ಸಿಸಿಬಿ ಪೊಲೀಸರ ತಂಡ ಮುಂಜಾನೆ ನೆಲಮಂಗಲ ಟೋಲ್‌ ಬಳಿ ಬಸ್‌ ತಪಾಸಣೆ ನಡೆಸಿದರು.

ಹೊರ ರಾಜ್ಯಗಳಿಂದ ಬೆಂಗಳೂರಿಗೆ ತುಮಕೂರು ರಸ್ತೆ ಮೂಲಕವೇ ಅತಿ ಹೆಚ್ಚು ವಾಹನಗಳು ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಮೀಪದ ಟೋಲ್‌ ಗೇಟ್‌ ಬಳಿ ಬಸ್‌ ಗಳನ್ನು ಮುಂಜಾನೆ 5.30ರಿಂದ 10 ಗಂಟೆವರೆಗೆ ಸಿಸಿಬಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಬಸ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿಲ್ಲ. ಈ ಕಾರ್ಯಾಚರಣೆಗೆ ಶ್ವಾನ ದಳವನ್ನು ಕೂಡಾ ಸಿಸಿಬಿ ಬಳಸಿದೆ.

ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ; ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಸೆರೆ

‘ಇತ್ತೀಚಿಗೆ ಕೆಲ ಡ್ರಗ್ಸ್‌ ಪೆಡ್ಲರ್‌ಗಳನ್ನು ವಿಚಾರಣೆ ವೇಳೆ ಬಸ್‌ನಲ್ಲಿ ಡ್ರಗ್ಸ್‌ ಸಾಗಾಣಿಕೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಗೋವಾ, ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಬಸ್‌ನಲ್ಲಿ ಡ್ರಗ್ಸ್‌ ಸಾಗಿಸುವ ಪೆಡ್ಲರ್‌ಗಳು, ನಗರ ಪ್ರವೇಶಿಸುವ ಮುನ್ನ ಮಾರ್ಗಮಧ್ಯೆ ಬಸ್ಸಿಳಿದು ಹೋಗುತ್ತಿದ್ದರು. ಹೀಗಾಗಿ ನೆಲಮಂಗಲ ಸಮೀಪವೇ ಬಸ್‌ಗಳನ್ನು ಅಡ್ಡಗಟ್ಟಿಪರಿಶೀಲನೆ ನಡೆಸಲಾಯಿತು’ ಎಂದು ಜಂಟಿ ಆಯುಕ್ತ (ಅಪರಾಧ) ಡಾ.ಎಸ್‌.ಡಿ.ಶರಣಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನಗರದಲ್ಲಿ ಸಂಪೂರ್ಣವಾಗಿ ಡ್ರಗ್ಸ್‌ ದಂಧೆ ಮಟ್ಟಹಾಕಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೆಡ್ಲರ್‌ಗಳ ಬಂಧನದಷ್ಟೇ ಪೂರೈಕೆ ಮೂಲ ಪತ್ತೆ ಹಚ್ಚುವುದು ಸಹ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಡ್ರಗ್ಸ್‌ ಸರಬರಾಜಿನ ದಾರಿಗಳನ್ನು ಶೋಧಿಸಿ ಪೂರೈಕೆದಾರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಪರಾಧ ವಿಭಾಗ ಜಂಟಿ ಆಯುಕ್ತ ಡಾ.ಎಸ್‌.ಡಿ.ಶರಣಪ್ಪ ತಿಳಿಸಿದ್ದಾರೆ.