ಆಳ್ವಾ ವಿರುದ್ಧ ಸಾಕ್ಷ್ಯಾಧಾರಗಳಿವೆ, ಹೈಕೋರ್ಟ್‌ಗೆ ಸಿಸಿಬಿ ಮನವಿ|ಆಳ್ವಾ ಇತರೆ ಆರೋಪಿಗಳಿಗೆ ಡ್ರಗ್ಸ್‌ ಮಾರಾಟ ಮಾಡಿರುವ ಬಗ್ಗೆ ತನಿಖೆ ವೇಳೆ ಸಾಕ್ಷ್ಯಧಾರಗಳು ತನಿಖೆ ವೇಳೆ ಲಭ್ಯ| ನ್ಯಾಯಾಲಯವು ಎಫ್‌ಐಆರ್‌ ರದ್ದುಪಡಿಸಿದರೆ ಅಥವಾ ತಡೆಯಾಜ್ಞೆ ನೀಡಿದರೆ ತನಿಖೆಗೆ ಅಡ್ಡಿ| 

ಬೆಂಗಳೂರು(ಅ.17): ಡ್ರಗ್ಸ್‌ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವಾ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಪಡಿಸಬಾರದು ಎಂದು ಸಿಸಿಬಿ ಪೊಲೀಸರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಡ್ರಗ್ಸ್‌ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಪಡಿಸುವಂತೆ ಕೋರಿ ಆದಿತ್ಯಾ ಆಳ್ವಾ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ ಮುಂದೆ ಶುಕ್ರವಾರ ಬಂದಾಗ ಸಿಸಿಬಿ ಪೊಲೀಸರ ಪರ ವಕೀಲರು ಹಾಜರಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ. 

ಎಲ್ಲಿದ್ದರೂ ಬಲೆಗೆ ಬೀಳಲೇಬೇಕು, ಅಂಥಾ ಪ್ಲಾನ್ ಮಾಡಿದೆ ಸಿಸಿಬಿ!

ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿರುವ ಆದಿತ್ಯ ಆಳ್ವಾ ಡ್ರಗ್ಸ್‌ ಪೆಡ್ಲರ್‌ ಆಗಿದ್ದು, ಪ್ರಕರಣದ ಇತರೆ ಆರೋಪಿಗಳಿಗೆ ಡ್ರಗ್ಸ್‌ ಮಾರಾಟ ಮಾಡಿರುವ ಬಗ್ಗೆ ತನಿಖೆ ವೇಳೆ ಸಾಕ್ಷ್ಯಧಾರಗಳು ತನಿಖೆ ವೇಳೆ ಲಭ್ಯವಾಗಿದೆ. ಡ್ರಗ್ಸ್‌ ಮಾರಾಟದ ಜತೆಗೆ ಸೇವನೆ ಮಾಡಿರುವ ಬಗ್ಗೆಯೂ ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ತಲೆ ಮರೆಸಿಕೊಂಡಿರುವ ಆತನ ಪತ್ತೆಗೆ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಆದಿತ್ಯಾ ಆಳ್ವಾ ವಿರುದ್ಧದ ಪ್ರಕರಣ ತನಿಖಾ ಹಂತದಲ್ಲಿರುವ ಸಂದರ್ಭದಲ್ಲಿ ಎಫ್‌ಐಆರ್‌ ರದ್ದತಿಗೆ ಅರ್ಜಿ ಸಲ್ಲಿಸಿರುವುದು ಅಪ್ರಸ್ತುತ ಹಾಗೂ ಅಪಕ್ವತೆಯಿಂದ ಕೂಡಿದೆ. ಒಂದೊಮ್ಮೆ ನ್ಯಾಯಾಲಯವು ಎಫ್‌ಐಆರ್‌ ರದ್ದುಪಡಿಸಿದರೆ ಅಥವಾ ತಡೆಯಾಜ್ಞೆ ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ಈ ಆಕ್ಷೇಪಣೆ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರ ಮುಂದೂಡಿತು.