ಬೆಂಗಳೂರು(ಡಿ.23): ಕನ್ನಡ ಚಿತ್ರರಂಗದ ಮಾದಕ ವಸ್ತು ಜಾಲದ ನಂಟು ಪ್ರಕರಣದಲ್ಲಿ ಬಂಧಿತ ವಿನಯ್‌ಕುಮಾರ್‌ ವಿಚಾರಣೆ ವೇಳೆ ಮತ್ತೊಬ್ಬ ಚಿತ್ರನಟಿಗೆ ಮಾದಕ ದ್ರವ್ಯ ಜಾಲದಲ್ಲಿ ನಂಟು ಇದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿಗೆ ನೋಟಿಸ್‌ ನೀಡಲು ಸಿದ್ಧತೆ ಆರಂಭಿಸಿದ್ದು, ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಾ.ರಾಜ್‌ಕುಮಾರ್‌ ರಸ್ತೆ ಬ್ರಿಗೇಡ್‌ ಗೇಟ್‌ ಅಪಾರ್ಟ್‌ಮೆಂಟ್‌ ನಿವಾಸಿ ವಿನಯ್‌ಕುಮಾರ್‌ನನ್ನು ಇತ್ತೀಚೆಗೆ ಬಂಧಿಸಿ ಸಿಸಿಬಿ ಪೊಲೀಸರು ಡಿ.28ವರೆಗೆ ವಶಕ್ಕೆ ಪಡೆದಿದ್ದರು. ತೀವ್ರ ವಿಚಾರಣೆ ವೇಳೆ ಈತನ ಜತೆಗೆ ಕನ್ನಡ ಮತ್ತೊಬ್ಬ ನಟಿ ಪೇಜ್‌-3 ಪಾರ್ಟಿಗಳಿಗೆ ಹೋಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಡ್ರಗ್ಸ್‌ ಕೇಸ್‌: ಮಾಜಿ ಮಂತ್ರಿ ಪುತ್ರ ಎನ್‌ಸಿಬಿ ವಶಕ್ಕೆ

ತುಮಕೂರಿನ ಕುಣಿಗಲ್‌ನಲ್ಲಿ ಕಲ್ಲು ಕ್ವಾರೆ ನಡೆಸುತ್ತಿದ್ದ ವಿನಯ್‌, ಪೇಜ್‌-3 ಪಾರ್ಟಿಗಳನ್ನು ಆಯೋಜಕ ಆರೋಪಿ ವೈಭವ್‌ ಜೈನ್‌ ಆಪ್ತನಾಗಿದ್ದ. ರೆಸಾರ್ಟ್‌, ಪಂಚತಾರಾ ಹೋಟೆಲ್‌ ಮತ್ತು ತೋಟದ ಮನೆಗಳಲ್ಲಿ ವೈಭವ್‌ ಜೈನ್‌ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ವಿನಯ್‌ ಕುಮಾರ್‌ ವಿದೇಶಿ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ. ಡ್ರಗ್ಸ್‌ ಪ್ರಕರಣ ಬೆಳಕಿಗೆ ಬರುತ್ತಿದಂತೆ ವಿನಯ್‌ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು.