CCB Operation : ಸಿಎಂ ಕಚೇರಿ ನಕಲಿ ಅಧಿಕಾರಿ ಬಲೆಗೆ, ಈತ ಬಾಳೆಕಾಯಿ ವ್ಯಾಪಾರಿ!
* ವಿಶೇಷ ಅಧಿಕಾರಿ ಹೆಸರಲ್ಲಿ ಬಾಳೆಕಾಯಿ ವ್ಯಾಪಾರಿ ಮೋಸ
* ಖಾಸಗಿ ಕಾರಿಗೆ ಸರ್ಕಾರಿ ಲಾಂಛನ, ಜಾಗ್ವಾರ್, ಇನ್ನೋವಾ ಕಾರು ವಶ
* ಹಲವು ದಿನಗಳಿಂದ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು
* ದಾಳಿ ವೇಳೆ ಪೊಲೀಸರಿಗೇ ಅವಾಜ್, ದಾಖಲೆ ಕೇಳುತ್ತಿದ್ದಂತೆ ಥಂಡ
* ಕಾರಿನ ಡ್ಯಾಶ್ ಬೋರ್ಡಲ್ಲಿ ಇತ್ತು .1.20 ಲಕ್ಷ ಪತ್ತೆ
ಬೆಂಗಳೂರು(ಡಿ. 16) ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಅಧಿಕಾರಿ ಎಂದು ಜನರಿಗೆ ನಂಬಿಸಿ ವಂಚಿಸುತ್ತಿದ್ದ ಬಾಳೆಕಾಯಿ ವ್ಯಾಪಾರಿಯೊಬ್ಬನನ್ನು ಕೆಂಗೇರಿ (Bengaluru Police) ಠಾಣೆ ಪೊಲೀಸರ ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದ ನಿವಾಸಿ ಉದಯ ಪ್ರಭು ಬಂಧಿತನಾಗಿದ್ದು, ಆರೋಪಿಯಿಂದ .1.20 ಲಕ್ಷ ನಗದು, 1 ಲ್ಯಾಪ್‌ಟಾಪ್, 4 ಐ-ಫೋನ್, ಸರ್ಕಾರಿ ಅಧಿಕಾರಿ ಹೆಸರಿನ ನಕಲಿ ಗುರುತಿನ ಚೀಟಿ ಹಾಗೂ ಜಾಗ್ವಾರ್, ಇನ್ನೋವಾ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ತನ್ನ ಕಾರಿಗೆ ಸರ್ಕಾರದ ವಿಶೇಷ ಅಧಿಕಾರಿ ಎಂದು ಸ್ಟೀಕರ್ ಹಾಕಿಕೊಂಡು ಪ್ರಭು ಓಡಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ(CCB), ಆತನ ಚಟುವಟಿಕೆಗಳ ಮೇಲೆ ಶಂಕೆ ಮೇರೆಗೆ ಮನೆ ಮೇಲೆ ದಾಳಿ ನಡೆಸಿ ಮಂಗಳವಾರ ಪರಿಶೀಲಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಸಿಸಿಬಿ ಇನ್‌ಸ್ಪೆಕ್ಟರ್ ಭರತ್ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭು, ತನ್ನ ಕುಟುಂಬದ ಜತೆ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿದ್ದ. ಮೊದಲು ಕಾಟನ್‌ಪೇಟೆಯಲ್ಲಿ ಬಾಳೆಕಾಯಿ ಮಂಡಿ ಇಟ್ಟುಕೊಂಡಿದ್ದ ಆತ, ಇತ್ತೀಚೆಗೆ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಜನರಿಗೆ ಟೋಪಿ ಹಾಕಿ ಸುಲಭವಾಗಿ ಹಣ ಸಂಪಾದಿಸುವ ದಂಧೆಗಿಳಿದಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಭರತ್, ಆರ್.ಆರ್.ನಗರದಲ್ಲಿ ಇರುವ ಪ್ರಭು ಮನೆ ಮೇಲೆ ಮಂಗಳವಾರ ದಾಳಿ ನಡೆಸಿದರು. ಆಗ ಆತನ ಕಾರು ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿ ಭಾನಗಡಿ ಬಯಲಾಗಿದೆ.
ಬೈ ಎಲೆಕ್ಷನ ಟೈಮ್ ನಲ್ಲಿ ಹುಟ್ಟಿಕೊಂಡಿದ್ದ ನಕಲಿ ಅಬಕಾರಿ ಅಧಿಕಾರಿ
ಆರೋಪಿಯ ಇನ್ನೋವಾ ಕಾರಿಗೆ ಕರ್ನಾಟಕ ಸರ್ಕಾರ ಎಂದು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸ್ಟೀಕರ್ ಹಾಕಿಕೊಂಡಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಕಾರು ನನ್ನ ಪತ್ನಿಯ ಹೆಸರಿನಲ್ಲಿದೆ. ನಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಅಧಿಕಾರಿ ಎಂದು ಹೇಳಿ ಗುರುತಿನ ಚೀಟಿ ತೋರಿಸಿದ. ಆ ಗುರುತಿನ ಪತ್ರ ಪಡೆದು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಯಿತು. ಅಲ್ಲದೆ ಖಾಸಗಿ ವಾಹನಕ್ಕೆ ಕರ್ನಾಟಕ ಸರ್ಕಾರ ಎಂದು ಬರೆಯಿಸಿ, ಲಾಂಛನ ಹಾಕಿಸಿಕೊಂಡಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಆತನಿಗೆ ಸೂಚಿಸಲಾಯಿತು. ಆದರೆ ಆತನ ಬಳಿ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನನ್ನ ಮಾವ ಮಾಜಿ ಸಿಎಂ ಗೊತ್ತಾ? ಇನ್ನು ಸಿಸಿಬಿ ದಾಳಿ ವೇಳೆ ‘ನನ್ನ ಮಾವ ಮಾಜಿ ಮುಖ್ಯಮಂತ್ರಿ ಗೊತ್ತಾ. ನಾನು ಅವರ ತಂಗಿ ಮಗ. ನಮ್ಮ ಮಾವನಿಗೆ ಗೊತ್ತಾದರೆ ನಿಮಗೆ ಕಷ್ಟ’ ಎಂದು ಆರೋಪಿ ಜೋರು ಮಾಡಿದ್ದಾನೆ. ಆದರೆ ಈ ಮಾತಿಗೆ ಕ್ಯಾರೇ ಎನ್ನದ ಪೊಲೀಸರು, ಆರೋಪಿಯ ಇನ್ನೋವಾ ಕಾರನ್ನು ತಪಾಸಣೆ ನಡೆಸಿದಾಗ ಡ್ಯಾಶ್ ಬೋರ್ಡ್‌ನಲ್ಲಿ .1.20 ಲಕ್ಷ , 3 ಆ್ಯಪಲ್ ಕಂಪನಿ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್ ಪತ್ತೆಯಾಗಿವೆ. ಈ ಹಣದ ಬಗ್ಗೆ ವಿಚಾರಿಸಿದಾಗ ಆತ ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾನೆ. ಕೊನೆಗೆ ಕೆಂಗೇರಿ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ ಹೆಚ್ಚಿನ ತನಿಖೆಗೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.