ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ರೋಹಿತ್‌ ಶರ್ಮಾ ಅವರ ಭಾಮೈದ ಬಂಟಿ ಸಜ್ದೇ ಹಾಗೂ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ರ ಸೋದರ ಸೊಹೇಲ್‌ ಖಾನ್‌ ಅವರನ್ನು ಸಿಬಿಐ ಗುರುವಾರ ವಿಚಾರಣೆಗೆ ಒಳಪಡಿಸಿದೆ.

ಬಂಟಿ ಸಜ್ದೇ ಅವರು ಕ್ರೀಡಾ ಹಾಗೂ ಮನರಂಜನಾ ಕಂಪನಿಯೊಂದನ್ನು ನಡೆಸುತ್ತಿದ್ದು, ಇದೇ ಕಂಪನಿಯಲ್ಲಿ ಸುಶಾಂತ್‌ರ ಮಾಜಿ ಮ್ಯಾನೇಜರ್‌ಗಳಾದ ಶ್ರುತಿ ಮೋದಿ ಹಾಗೂ ದಿಶಾ ಸಾಲಿಯಾನ್‌ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಜ್ದೇ ಅವರನ್ನು ವಿಚಾರಣೆ ನಡೆಸಿ, ಸುಶಾಂತ್‌ರ ಹಣಕಾಸು ವ್ಯವಹಾರಗಳನ್ನು ದಿಶಾ ಹಾಗೂ ಶ್ರುತಿ ಎಷ್ಟುಕಾಲ ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಪಡೆಯಲಾಗಿದೆ.

ಸುಶಾಂತ್ ಸಿಂಗ್ ಕೊಲೆ ಅನ್ನೋಕೆ ನೋ ಪ್ರೂಫ್: ಆತ್ಮಹತ್ಯೆ ಆ್ಯಂಗಲ್‌ನಲ್ಲಿ ಸಿಬಿಐ ತನಿಖೆ

ಕ್ರಿಕೆಟಿಗ ರೋಹಿತ್‌ ಅವರು ರಿತಿಕಾ ಸಜ್ದೇ ಎಂಬುವರನ್ನು ವಿವಾಹವಾಗಿದ್ದು, ಬಂಟಿ ಅವರು ರಿತಿಕಾರ ಸೋದರ ಸಂಬಂಧಿ. ಬಂಟಿ ಅವರ ಅಕ್ಕ ಸೀಮಾ ಅವರನ್ನು ನಟ ಸೊಹೇಲ್‌ ಖಾನ್‌ ವಿವಾಹವಾಗಿದ್ದಾರೆ.

ಎನ್‌ಸಿಬಿ ವಶಕ್ಕೆ ಜೈದ್‌:

ಸುಶಾಂತ್‌ ಸಾವು ಪ್ರಕರಣ ಕುರಿತಾದ ಡ್ರಗ್ಸ್‌ ದಂಧೆ ಕೇಸಿನಲ್ಲಿ ಬಂಧಿತನಾಗಿರುವ ಡ್ರಗ್ಸ್‌ ಡೀಲರ್‌ ಜೈದ್‌ ವಿಲಾತ್ರಾನನ್ನು ಗುರುವಾರ ಮುಂಬೈ ಕೋರ್ಟು 7 ದಿನಗಳ ಕಾಲ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ವಶಕ್ಕೆ ಒಪ್ಪಿಸಿದೆ. ವಿಲಾತ್ರಾ ಈಗಾಗಲೇ ತಾನು ಯಾರಿಗೆ ಡ್ರಗ್ಸ್‌ ಪೂರೈಸುತ್ತಿದ್ದೆ ಎಂದು ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.