ಹಸುಗಳ್ಳತನಕ್ಕೆ ಎತ್ತಿದ ಕೈ, ಕದ್ದ ಹಸು ಕಾರಿನಲ್ಲಿ ಸಾಗಿಸುತ್ತಿದ್ದ ಭೂಪರು! ಫೈರೋಜ್ ಬೇಗ್, ಸೈಯದ್ ಬಂಧನ! ಕದ್ದಿದ್ದೆಷ್ಟು?
ಬೆಂಗಳೂರು ಹೊರವಲಯದಲ್ಲಿ ಹಸು-ಕುರಿಗಳನ್ನು ಕಳವು ಮಾಡುತ್ತಿದ್ದ ಮಾಂಸದಂಗಡಿ ಕೆಲಸಗಾರ ಸೇರಿದಂತೆ ಇಬ್ಬರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಕಾರು ಹಾಗೂ ₹1 ಲಕ್ಷ ನಗದು ಸೇರಿದಂತೆ ₹5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು (ಫೆ.19): ನಗರದ ಹೊರವಲಯದಲ್ಲಿ ಹಸು-ಕುರಿಗಳನ್ನು ಕಳವು ಮಾಡುತ್ತಿದ್ದ ಮಾಂಸದಂಗಡಿ ಕೆಲಸಗಾರ ಸೇರಿದಂತೆ ಇಬ್ಬರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲೂಕಿನ ಸರ್ಜಾಪುರದ ಅಡಿಗಾರನಹಳ್ಳಿ ನಿವಾಸಿ ಫೈರೋಜ್ ಬೇಗ್ ಹಾಗೂ ಅಡಿಗಾರ ಕಲ್ಲಹಳ್ಳಿ ಗ್ರಾಮದ ಸೈಯದ್ ರಿಜ್ವಾನ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಕಾರು ಹಾಗೂ ₹1 ಲಕ್ಷ ನಗದು ಸೇರಿದಂತೆ ₹5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ತಲಘಟ್ಟಪುರ ಸಮೀಪದ ಹೊಸಹಳ್ಳಿಯಲ್ಲಿ ರೈತರ ಕೊಟ್ಟಿಗೆ ಮನೆಯಲ್ಲಿ ಕಟ್ಟಿದ್ದ ನಾಲ್ಕು ಹಸುಗಳು ಕಳ್ಳತನವಾಗಿದ್ದವು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಹಸು ಕಳ್ಳರನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರಿನಲ್ಲೇ ಕದ್ದ ಹಸುಗಳ ಸಾಗಾಣಿಕೆ:
ಇದನ್ನೂ ಓದಿ: ಮತ್ತೆ ಗೋವಿನ ಕರುವಿಗೆ ದುರುಳರಿಂದ ಮಚ್ಚಿನೇಟು! ನೋವಿನಿಂದ ಒದ್ದಾಡಿದ ಕರು
ಫೈರೋಜ್ ಬೇಗ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 29ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವ ಫೈರೋಜ್, ಹಸು ಹಾಗೂ ಕುರಿ ಕಳ್ಳತನಕ್ಕೆ ಕುಖ್ಯಾತಿ ಪಡೆದಿದ್ದಾನೆ. ರಾತ್ರಿ ನಗರ ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಸಹಚರ ಸೈಯದ್ ಜತೆ ಸುತ್ತಾಡುತ್ತಿದ್ದ ಬೇಗ್, ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದ ಹಸು ಹಾಗೂ ಕುರಿಗಳನ್ನು ಕಳವು ಮಾಡುತ್ತಿದ್ದ. ಕದ್ದ ಹಸುಗಳನ್ನು ಸ್ಯಾಂಟ್ರೋ ಕಾರಿನಲ್ಲಿ ತುಂಬಿಕೊಂಡು ಆರೋಪಿಗಳು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ ತಲಘಟ್ಟಪುರ ಸಮೀಪದ ಹೊಸಹಳ್ಳಿಯಲ್ಲಿ ನಾಲ್ಕು ಹಸುಗಳು ಕಳ್ಳತನದ ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಬ್ರಹ್ಮಣ್ಯಪುರ ಹಾಗೂ ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 5 ಹಸುಗಳು ಹಾಗೂ ಕುರಿ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊಟ್ಟಿಗೆಗೆ ನುಗ್ಗಿ ಹಸುಗಳ ಕಳವು: ಸಿನಿಮೀಯ ಮಾದರಿಯಲ್ಲಿ ಚೇಸ್..!
ಆಟೋ ಚಾಲಕ, ಮಾಂಸದಂಗಡಿ ಕೆಲಸಗಾರ:
ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫೈರೋಜ್ ಸುಲಭವಾಗಿ ಹಣ ಸಂಪಾದನೆಗೆ ಹಸು ಕಳ್ಳತನಕ್ಕಿಳಿದಿದ್ದ. ಆಟೋ ಚಾಲಕನಾಗಿದ್ದ ಸೈಯದ್ ಸಹ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.