ಕೊಟ್ಟಿಗೆಗೆ ನುಗ್ಗಿ ಹಸುಗಳ ಕಳವು: ಸಿನಿಮೀಯ ಮಾದರಿಯಲ್ಲಿ ಚೇಸ್..!
ಎನ್.ಆರ್.ಪುರ ಪೊಲೀಸ್ ಠಾಣಾ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಗ್ರಹಾರದ ಕೃಷಿಕ ಉಮೇಶ್ ಎಂಬವರ ದನದ ಕೊಟ್ಟಿಗೆ ಭಾನುವಾರ ಮಧ್ಯರಾತ್ರಿ ಇಬ್ಬರು ಗೋ ಕಳ್ಳರು ನುಗ್ಗಿ ಎರಡು ಗೋವುಗಳನ್ನು ಅಪರಿಹರಿಸಿದ್ದರು. ಆದರೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಿನಿಮೀಯ ಮಾದರಿಯಲ್ಲಿ ಚೇಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬಾಳೆಹೊನ್ನೂರು(ಜು.21): ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಹೊತ್ತೊಯ್ದು ವಾಹನದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಹಿಂಬಾಲಿಸಿದ ಪರಿಣಾಮ ಗೋ ಕಳ್ಳರು ವಾಹನವನ್ನು ಅರ್ಧ ದಾರಿಯಲ್ಲಿಯೇ ನಿಲ್ಲಿಸಿ, ಪರಾರಿಯಾದ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ.
ಎನ್.ಆರ್.ಪುರ ಪೊಲೀಸ್ ಠಾಣಾ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಗ್ರಹಾರದ ಕೃಷಿಕ ಉಮೇಶ್ ಎಂಬವರ ದನದ ಕೊಟ್ಟಿಗೆ ಭಾನುವಾರ ಮಧ್ಯರಾತ್ರಿ ಇಬ್ಬರು ಗೋ ಕಳ್ಳರು ನುಗ್ಗಿ ಎರಡು ಗೋವುಗಳನ್ನು ಅಪರಿಹರಿಸಿದ್ದರು. ವಾಹನಕ್ಕೆ ತುಂಬುತ್ತಿದ್ದ ವೇಳೆ ಗೋವುಗಳು ಕೂಗಿಕೊಂಡ ಕಾರಣ ಮನೆ ಮಾಲೀಕರಿಗೆ ಎಚ್ಚರವಾಗಿ ತಕ್ಷಣ ಹೊರಬಂದಿದ್ದಾರೆ.
ಮಾಲೀಕರು ಕೂಗಿಕೊಂಡರೂ ಕಳ್ಳರು ಗೋವುಗಳನ್ನು ಬಿಡದೇ ಮಹೀಂದ್ರಾ ಝೈಲೋ ಕಾರಿನೊಳಗೆ ತುಂಬಿಕೊಂಡು ಬಾಳೆಹೊನ್ನೂರು ಕಡೆಗೆ ಕಾಲ್ಕಿತ್ತರು. ಮನೆ ಮಾಲೀಕರು ತಕ್ಷಣ ಎಚ್ಚೆತ್ತು ಸಂಘಟನೆಯ ಯುವಕರಿಗೆ ತಿಳಿಸಿ, ಬೇರೊಂದು ವಾಹನದ ಮೂಲಕ ಗೋ ಕಳ್ಳರನ್ನು ಬಂಡಿಹೊಳೆಯವರೆಗೆ ಹಿಂಬಾಲಿಸಿದರು. ಆದರೂ ಕಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ. ಕೂಡಲೇ ಅವರು ಚಿಕ್ಕಅಗ್ರಹಾರದ ವಲಯ ಅರಣ್ಯ ಇಲಾಖೆಯ ರಾತ್ರಿಗಸ್ತಿನ ಸಿಬ್ಬಂದಿಗೆ ತಿಳಿಸಿದರು.
ಮತ್ತೆ ಮೇಷ್ಟ್ರಾದ ವೈಎಸ್‌ವಿ: ವರ್ಷ ಪೂರ್ತಿ ‘ದತ್ತ’ ಆನ್‌ಲೈನ್ ಗಣಿತ ಪಾಠ!
ಬಾಳೆಹೊನ್ನೂರು ಅರಣ್ಯ ಇಲಾಖೆ ಸಿಬ್ಬಂದಿ ಗೋ ಕಳ್ಳರ ವಾಹನವನ್ನು ಹಿಂಬಾಲಿಸಿಕೊಂಡು ಬಂದು, ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದರು. ಬಾಳೆಹೊನ್ನೂರು ಪಿಎಸ್‌ಐ ತಕ್ಷಣ ಎಚ್ಚೆತ್ತು ಸಿಬ್ಬಂದಿಯೊಂದಿಗೆ ಎನ್.ಆರ್.ಪುರ ರಸ್ತೆಯ ಕಡೆಗೆ ತೆರಳಿದರು. ಆ ಭಾಗದಿಂದ ಬಂದ ಗೋ ಕಳ್ಳರ ವಾಹನವನ್ನು ಅಡ್ಡಹಾಕಿದರು. ಆದರೆ ಗೋ ಕಳ್ಳರು ವಾಹನವನ್ನು ನಿಲ್ಲಿಸದೇ ವಾಟುಕೊಡಿಗೆ- ರಂಭಾಪುರಿ ಮಠ ರಸ್ತೆ ಕಡೆಗೆ ತಿರುಗಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೂ ಪೊಲೀಸರು ಬಿಡದೇ ವಾಹನವನ್ನು ಹಿಂಬಾಲಿಸಿದರು. ತಾವು ಸಿಕ್ಕಿಹಾಕಿಕೊಳ್ಳುವ ಮುನ್ಸೂಚನೆ ಅರಿತ ಗೋ ಕಳ್ಳರು ವಾಟುಕೊಡಿಗೆ ಬಳಿ ವಾಹನ ನಿಲ್ಲಿಸಿ ಸ್ಥಳದಿಂದ ಪರಾರಿಯಾದರು. ಕಾರ್‌ನಲ್ಲಿ ಇಬ್ಬರು ಗೋ ಕಳ್ಳರು ಇದ್ದು, ಕಾರ್‌ನ ಸ್ಟೇರಿಂಗ್ ಲಾಕ್ ಮಾಡಿ ಓಡಿಹೋಗಿದ್ದಾರೆ. ಕಾರ್‌ನೊಳಗೆ ಎರಡು ಗೋವುಗಳಿದ್ದವು.
ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಲ್ಲಿನ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಾಗಲಿದೆ ಎಂದು ಪಿಎಸ್‌ಐ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ನೀತು ಆರ್. ಗುಡೆ, ಸಿಬ್ಬಂದಿ ಶಶಿಕುಮಾರ್, ಕಾರ್ತಿಕ್, ಪುನೀತ್, ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ್, ಪ್ರಭು, ಪ್ರತಾಪ್ ಭಾಗವಹಿಸಿದ್ದರು.