ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದಡಿ ಕುಖ್ಯಾತ ರೌಡಿ ಸೈಕಲ್‌ ರವಿ, ಆತನ ಶಿಷ್ಯ ರೌಡಿ ಬೇಕರಿ ರಘು ಮತ್ತು ಆತನ ಸಹಚರರ ವಿರುದ್ಧ ಸುಬ್ರಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಬೆಂಗಳೂರು (ಆ.24): ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪದಡಿ ಕುಖ್ಯಾತ ರೌಡಿ ಸೈಕಲ್‌ ರವಿ, ಆತನ ಶಿಷ್ಯ ರೌಡಿ ಬೇಕರಿ ರಘು ಮತ್ತು ಆತನ ಸಹಚರರ ವಿರುದ್ಧ ಸುಬ್ರಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬನಗಿರಿನಗರ ನಿವಾಸಿ ಉದ್ಯಮಿ ಗಜೇಂದ್ರ(36) ಎಂಬುವವರು ನೀಡಿದ ದೂರಿನ ಮೇರೆಗೆ ಇವರ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ: ಉದ್ಯಮಿ ಗಜೇಂದ್ರ ಅವರು ಆ.20 ರಂದು ಸ್ನೇಹಿತರೊಬ್ಬರ ಗೃಹ ಪ್ರವೇಶಕ್ಕೆ ಹೋಗಿ ರಾತ್ರಿ 11 ಗಂಟೆ ಸುಮಾರಿಗೆ ಇಟ್ಟಮಡುವಿನ ರಾಮಚಂದ್ರಪುರ ಪಾರ್ಕ್ ಬಳಿ ಕಾರಿನಲ್ಲಿ ಕುಳಿತ್ತಿದ್ದರು. ಈ ವೇಳೆ ಸುಮಾರು 10 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಕಾರಿನ ಬಳಿ ಬಂದು ಏಕಾಏಕಿ ಕಾರಿನ ಗಾಜು ಜಖಂಗೊಳಿಸಿದ್ದಾರೆ. ‘ಕಾರಿನಿಂದ ಇಳಿದು ಹೊರಗೆ ಬಾ. ನಿನ್ನನ್ನು ಸಾಯಿಸಲು ಅಣ್ಣ (ಸೈಕಲ್‌ ರವಿ, ಬೇಕರಿ ರಘು) ಹೇಳಿದ್ದಾರೆ. ಮುಂದೆ ಕಾರಿನಲ್ಲೇ ಅಣ್ಣ ಕುಳಿತಿದ್ದಾರೆ’ ಎಂದು ಆವಾಜ್‌ ಹಾಕಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಸೀರೆ ಕದಿಯುತ್ತಿದ್ದ ಗ್ಯಾಂಗ್‌ ಅರೆಸ್ಟ್!

ಇದರಿಂದ ಆತಂಕಗೊಂಡ ಗಜೇಂದ್ರ, ಕಾರು ಸ್ಟಾರ್ಚ್‌ ಮಾಡಿಕೊಂಡು ಮುಂದೆ ಬಂದು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಸ್ವಲ್ಪ ದೂರ ಆ ಕಾರನ್ನು ಬೆನ್ನಟ್ಟಿಮಾರಕಾಸ್ತ್ರ ಬೀಸಿದ್ದಾರೆ. ಅಷ್ಟರಲ್ಲಿ ಗಜೇಂದ್ರ ಅವರು ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಹೊಯ್ಸಳ ಗಸ್ತು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಜೇಂದ್ರ ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಇತ್ತ ಹೊಯ್ಸಳ ವಾಹನ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಗಜೇಂದ್ರ ಅವರು ಸುಬ್ರಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.

ಇಸ್ರೋ ವಿಜ್ಞಾನಿಗಳ ಸಾಧನೆ: ನೆಹರು ತಾರಾಲಯದಲ್ಲಿ ಹರ್ಷೋದ್ಘಾರ

ಸಿಸಿಬಿ ಎಚ್ಚರಿಕೆಯ ಮಾರನೇ ದಿನವೇ ಘಟನೆ: ಪ್ರಕರಣವೊಂದರ ವಿಚಾರಣೆ ಸಂಬಂಧ ಕೋರ್ಚ್‌ಗೆ ಬಂದಿದ್ದ ರೌಡಿ ಬೇಕರಿ ರಘುನನ್ನು ಆ.19ರಂದು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಸಿ, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದರು. ಮಾರನೇ ದಿನ ರಾತ್ರಿಯೇ ರೌಡಿ ಬೇಕರಿ ರಘು ಹಾಗೂ ಆತನ ಸಹಚರರು ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೆ ಯತ್ನಿಸಿದ್ದಾರೆ.