ಬುಲ್ಲಿ ಬಾಯ್‌’ ಬಂದ್‌ ಮಾಡಿಸಿದ ಕೇಂದ್ರ ಸರ್ಕಾರ ಆ್ಯಪ್‌ನಲ್ಲಿ ‘ಈ ಮಹಿಳೆಯರು ಹರಾಜಿಗಿದ್ದಾರೆ’ ಎಂದು ಪ್ರಕಟವಾಗಿತ್ತು ಇದರ ವಿರುದ್ಧ ಸಂಸದೆ ಪ್ರಿಯಾಂಕಾ ಚತುರ್ವೇದಿ ಸೇರಿ ಅನೇಕರ ಆಕ್ಷೇಪ ಈ ದೂರುಗಳಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ದಿಲ್ಲಿ ಪೊಲೀಸರಿಂದ ಎಫ್‌ಐಆರ್‌ ದಾಖಲು

ನವದೆಹಲಿ(ಜ.03): ಮುಸ್ಲಿಂ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರನ್ನು ಅವಹೇಳನಕಾರಿ, ಅಶ್ಲೀಲವಾಗಿ ಚಿತ್ರಿಸಿ ‘ಹರಾಜು’ ಹಾಕುತ್ತಿದ್ದ ‘ಬುಲ್ಲಿ ಬಾಯ್‌’ ಆ್ಯಪ್‌ ಅನ್ನು ಕೇಂದ್ರ ಸರ್ಕಾರ ಬಂದ್‌ ಮಾಡಿಸಿದೆ. ಶಿವಸೇನೆ ಸಂಸದೆ ಪ್ರಿಯಾಂಕಾ ಚರ್ತುವೇದಿ ಅವರ ಟ್ವೀಟರ್‌ ಮನವಿಗೆ ಸ್ಪಂದಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಅಶ್ವಿನಿ ವೈಷ್ಣವ್‌, ಬುಲ್ಲಿ ಆ್ಯಪ್‌ ಪೋರ್ಟಲ್‌ ಅನ್ನು ‘ಗಿಟ್‌ಹಬ್‌’ ತನ್ನ ವೇದಿಕೆಯಿಂದ ಬ್ಲಾಕ್‌ ಮಾಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ವರ್ಷ ‘ಸುಲ್ಲಿ ಡೀಲ್ಸ್‌’ ಹೆಸರಿನಲ್ಲಿ ಇದೇ ರೀತಿ ಮುಸ್ಲಿಂ ಮಹಿಳಾ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ, ಅವರನ್ನು ಹರಾಜಿಗೆ ಇಡುವ ರೀತಿ ಬಿಂಬಿಸುವ ವೆಬ್‌ಪೋರ್ಟಲ್‌ ಕಾಣಿಸಿಕೊಂಡಿತ್ತು. ಆ ಕುರಿತು ಸಾಕಷ್ಟುವಿವಾದ ಎದ್ದ ಬಳಿಕ ಅದನ್ನು ಸಾಫ್ಟ್‌ವೇರ್‌ ಅಭಿವೃದ್ಧಿ ತಾಣವಾದ ‘ಗಿಟ್‌ಹಬ್‌’, ತನ್ನ ವೇದಿಕೆಯಿಂದ ಬ್ಲಾಕ್‌ ಮಾಡಿತ್ತು.

ಆದರೆ 2022 ಜ.1ರಂದು ‘ಬುಲ್ಲಿ ಬಾಯ್‌’ ಹೆಸರಿನ ಪೋರ್ಟಲ್‌ ಗಿಟ್‌ಹಬ್‌ನಲ್ಲಿ ಪ್ರತ್ಯಕ್ಷವಾಗಿ ಹಲವು ಮುಸ್ಲಿಂ ಮಹಿಳಾ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿ 100ಕ್ಕೂ ಹೆಚ್ಚು ಜನರ ಫೋಟೋ ಪ್ರಕಟಿಸಿತ್ತು. ಅದರಲ್ಲಿ ಇವರನ್ನು ಹರಾಜು ಹಾಕಲಾಗುತ್ತದೆ ಎಂದು ಬರೆಯಲಾಗಿತ್ತು.

ಪ್ರವಾಸಕ್ಕೆ ಬಂದವರ ಬೆದರಿಸಿ ರೇಪ್ ಎಸಗಿದ ನಕಲಿ ಪೊಲೀಸ್

ಈ ಬಗ್ಗೆ ಸಂಸದೆ ಪ್ರಿಯಾಂಕಾ ಚರ್ತುವೇದಿ ಕೇಂದ್ರ ಸರ್ಕಾರದ ಗಮನ ಸೆಳೆದು ‘ಸುಲ್ಲಿ ಡೀಲ್ಸ್‌ನಂಥ ವೇದಿಕೆಗಳ ಮೂಲಕ ಮಹಿಳೆಯರನ್ನು ದ್ವೇಷಿಸುವ ಮತ್ತು ಮತೀಯವಾಗಿ ಗುರಿ ಮಾಡುವ ಪೋರ್ಟಲ್‌ಗಳನ್ನು ನಿಷೇಧಿಸುವಂತೆ ಸತತವಾಗಿ ಮನವಿ ಸಲ್ಲಿಸಿದರೂ, ಪುನಃ ಅಂಥ ಪೋರ್ಟಲ್‌ಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಮಧ್ಯಪ್ರವೇಶ ಮಾಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಕ್ರಮ ಕೈಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲದೆ ಟ್ವೀಟರ್‌ನಲ್ಲೂ ಈ ತಾಣ ಇದ್ದ ಹಿನ್ನೆಲೆಯಲ್ಲಿ ಟ್ವೀಟರ್‌ಗೆ ದೂರು ಸಲ್ಲಿಸುವ ಮೂಲಕ ಅಲ್ಲಿಯೂ ಅದು ಕಾರ್ಯಾಚರಣೆ ನಡೆಸದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ಕಾನೂನು ಸುವ್ಯವಸ್ಥೆ ರಾಜ್ಯದ ವಿಚಾರವಾದ ಕಾರಣ, ಈ ಬಗ್ಗೆ ಸೂಕ್ತ ಕ್ರಮಕ್ಕೆ ದೆಹಲಿ ಮತ್ತು ಮುಂಬೈ ಪೊಲೀಸರಿಗೂ ಅಗತ್ಯ ಕ್ರಮಕ್ಕೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ದಿಲ್ಲಿ ಪೊಲೀಸರಿಂದ ಕೇಸು:

ಈ ನಡುವೆ ಬುಲ್ಲಿ ಆ್ಯಪ್‌ನಲ್ಲಿ ತಮ್ಮ ಫೋಟೋವನ್ನು ಅಶ್ಲೀಲ ರೀತಿಯಲ್ಲಿ ಪ್ರಕಟಿಸಿದ್ದ ಬಗ್ಗೆ ದೆಹಲಿ ಮೂಲದ ಮಹಿಳಾ ಪತ್ರಕರ್ತೆಯೊಬ್ಬರು ನೀಡಿದ ದೂರು ಆಧರಿಸಿ, ಅನಾಮಧೇಯ ವ್ಯಕ್ತಿ ವಿರುದ್ಧ ದೆಹಲಿ ಸೈಬರ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.