ಬೆಂಗಳೂರು(ಡಿ.27): ಕಲ್ಲು ಕ್ವಾರಿಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ನಾಯಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಯುವತಿ ಹಾಗೂ ಆಕೆಯ ಅಣ್ಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಟ್ಟಹಲಸೂರಿನ ನಿವಾಸಿ ಜೆನಿಫರ್‌ (17) ಮತ್ತು ಪ್ರೇಮ್‌ಕುಮಾರ್‌ (23) ಮೃತರು. ಜೆನಿಫರ್‌, ಪ್ರೇಮ್‌ ಕುಟುಂಬ ಸದಸ್ಯರ ಜತೆ ಶನಿವಾರ ಸಂಜೆ 4ರ ವೇಳೆಗೆ ಕಲ್ಲು ಕ್ವಾರಿ ಸಮೀಪ ಚಾರಣಕ್ಕೆ ಹೋಗಿದ್ದರು. ಈ ವೇಳೆ ಜೆನಿಫರ್‌ ಕಲ್ಲು ಕ್ವಾರಿಯ ನೀರಿನಲ್ಲಿ ನಾಯಿಗೆ ಸ್ನಾನ ಮಾಡಿಸಲು ತೆರಳಿದ್ದಳು. ಆಯ ತಪ್ಪಿ ನೀರಿನಲ್ಲಿ ಮುಳುಗಿದ್ದನ್ನು ಗಮನಿಸಿದ್ದ ಪ್ರೇಮ್‌ಕುಮಾರ್‌ ಸಹೋದರಿಯನ್ನು ಕಾಪಾಡಲು ನೀರಿಗೆ ಇಳಿದಿದ್ದು, ಆತ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಅಣ್ಣ, ತಂಗಿ ವಾಪಸ್‌ ಬರದೇ ಇದ್ದಾಗ ಕುಟುಂಬದ ಸದಸ್ಯರು ತುರ್ತು ಸೇವೆಗೆ ಕರೆ ಮಾಡಿದರು. 

ಕಾಲು ಜಾರಿ ಕೆರೆಗೆ ಬಿದ್ದು ದತ್ತ ಮಾಲಾಧಾರಿ ಸಾವು

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಕುಟುಂಬಸ್ಥರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.