Asianet Suvarna News Asianet Suvarna News

ಜಾಗದ ಖಾತೆ ಹೆಸರು ಬದಲಾವಣೆಗೆ ಲಂಚ: ವಿಶೇಷ ತಹಸೀಲ್ದಾರ್‌ ಅರೆಸ್ಟ್

  • ಜಾಗದ ಖಾತೆ ಹೆಸರು ಬದಲಾವಣೆಗೆ ಲಂಚ: ವಿಶೇಷ ತಹಸೀಲ್ದಾರ್‌ ಬಲೆಗೆ
  • 2 ಎಕರೆ ಜಾಗದ ಹೆಸರು ಬದಲಾವಣೆಗೆ ಮಧ್ಯವರ್ತಿಯ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಉತ್ತರ ತಹಸೀಲ್ದಾರ್‌
  • -ಹಣ ನೀಡಲು ಹೋದಾಗ ಸಿಕ್ಕಿಬಿದ್ದ ಮಧ್ಯವರ್ತಿ
  • ಆತನ ಮೂಲಕ ತಹಸೀಲ್ದಾರ್‌ಳನ್ನು ಬಲೆಗೆ ಬೀಳಿಸಿದ ಲೋಕಾ
Bribery for change of account name of place special tehsildar arrest rav
Author
First Published Nov 16, 2022, 7:01 AM IST

ಬೆಂಗಳೂರು (ನ.16) : ಕೃಷಿ ಜಮೀನಿನ ಖಾತೆಯಲ್ಲಿ ಹೆಸರು ಬದಲಾವಣೆ ಸಂಬಂಧ .5 ಲಕ್ಷ ಲಂಚ ಸ್ವೀಕರಿಸುವಾಗ ವಿಶೇಷ ತಹಸೀಲ್ದಾರ್‌ ಹಾಗೂ ಅವರ ಮಧ್ಯವರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್‌ ವರ್ಷಾ ಒಡೆಯರ್‌ ಹಾಗೂ ಮಧ್ಯವರ್ತಿ ರಮೇಶ್‌ ಬಂಧಿತರಾಗಿದ್ದು, ಕಂದಾಯ ಭವನದ ಸಮೀಪ ಸೆಂಟ್‌ ಮಾರ್ಥಸ್‌ ಆಸ್ಪತ್ರೆಯ ವಾಹನ ನಿಲುಗಡೆ ಪ್ರದೇಶದಲ್ಲಿ ದೂರುದಾರ ಕಾಂತರಾಜ್‌ ಅವರಿಂದ ಲಂಚ ಪಡೆಯುವಾಗ ಆರೋಪಿಗಳು ಪೊಲೀಸರಿಗೆ ಸೆರೆಯಾಗಿದ್ದಾರೆ.

ಕೋಟಿ ಮೌಲ್ಯದ ಭೂಮಿಗೆ ಲಕ್ಷ ಲಂಚ:

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಕೆಂಗನಹಳ್ಳಿ ಗ್ರಾಮದಲ್ಲಿ ಲಲಿತ್‌ ಕುಮಾರ್‌ ಎಂಬುವರಿಗೆ ಸೇರಿದ್ದ 2 ಎಕರೆ ಕೃಷಿ ಭೂಮಿಯನ್ನು ಕಾಂತರಾಜ್‌ ಖರೀದಿಸಿದ್ದರು. ಆದರೆ ಆ ಭೂಮಿಯ ಪಹಣಿಯಲ್ಲಿ ಲಲಿತ್‌ ಕುಮಾರ್‌ ಅವರ ಹೆಸರು ಉಲ್ಲೇಖವಾಗಿರಲಿಲ್ಲ. ಹೀಗಾಗಿ ಲಲಿತ್‌ ಕುಮಾರ್‌ ಪರವಾಗಿ ಕಾಂತರಾಜು ಅವರು, ಕೆಂಗನಹಳ್ಳಿ ಗ್ರಾಮದ ಭೂಮಿಯ ಖಾತೆಯಲ್ಲಿ ಹೆಸರು ಬದಲಾವಣೆಗೆ ಬೆಂಗಳೂರಿನ ಉತ್ತರ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ರಾಜ್ಯದ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಶಾಕ್‌..!

ಅರ್ಜಿ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿಗಳು, ಅ.22ರಂದು ಖಾತೆ ಹೆಸರು ಬದಲಾವಣೆಗೆ ಆದೇಶಿಸಿದ್ದರು. ಈ ಆದೇಶದ ಅನ್ವಯ ಪಹಣಿ ತಿದ್ದುಪಡಿಗೆ ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್‌ ವರ್ಷಾ ಒಡೆಯರ್‌ ಅವರಿಗೆ ಕಾಂತರಾಜು ಮನವಿ ಸಲ್ಲಿಸಿದ್ದರು. ಆಗ ‘ಕೆಂಗನಹಳ್ಳಿ ಗ್ರಾಮದಲ್ಲಿ ನೀವು ಖರೀದಿಸಿರುವ ಭೂಮಿಗೆ ಕೋಟ್ಯಂತರ ಮೌಲ್ಯವಿದೆ. ಹೀಗಾಗಿ ತಲಾ ಎಕರೆಗೆ .5 ಲಕ್ಷದಂತೆ .10 ಲಕ್ಷ ನೀಡಿದರೆ ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಕೊಡುತ್ತೇವೆ’ ಎಂದು ವಿಶೇಷ ತಹಸೀಲ್ದಾರ್‌ ಬೇಡಿಕೆ ಇಟ್ಟಿದ್ದರು. ಈ ವ್ಯವಹಾರಕ್ಕೆ ಮಧ್ಯವರ್ತಿ ರಮೇಶ್‌ನನ್ನು ವಿಶೇಷ ತಹಸೀಲ್ದಾರ್‌ ಬಳಸಿಕೊಂಡಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಕಾಂತರಾಜು ದೂರು ಸಲ್ಲಿಸಿದರು. ಅದರನ್ವಯ ಡಿವೈಎಸ್ಪಿ ಅಂಥೋನಿ ಜಾನ್‌ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು. ಪೂರ್ವನಿಗದಿಯಂತೆ ಕಂದಾಯ ಭವನದ ಸಮೀಪದಲ್ಲಿರುವ ನೃಪತುಂಗ ರಸ್ತೆಯ ಸೆಂಟ್‌ ಮಾರ್ಥಾಸ್‌ ಆಸ್ಪತ್ರೆ ವಾಹನ ನಿಲುಗಡೆ ಪ್ರದೇಶಕ್ಕೆ ಬರುವಂತೆ ಕಾಂತರಾಜ್‌ಗೆ ಮಧ್ಯವರ್ತಿ ರಮೇಶ್‌ ಸೂಚಿಸಿದ್ದ. ಅಂತೆಯೇ ಅಲ್ಲಿಗೆ ತೆರಳಿದ ಕಾಂತರಾಜ್‌ ಅವರಿಂದ ಮುಂಗಡವಾಗಿ .5 ಲಕ್ಷ ಸ್ವೀಕರಿಸುವಾಗ ರಮೇಶ್‌ನನ್ನು ಪೊಲೀಸರು ಬಂಧಿಸಿದರು. ಈ ಹಣ ತನಗೆ ಸೇರಿದ್ದಲ್ಲ. ವಿಶೇಷ ತಹಸೀಲ್ದಾರ್‌ ಸೂಚನೆ ಮೇರೆಗೆ ಹಣ ಪಡೆದಿದ್ದಾಗಿ ರಮೇಶ್‌ ಹೇಳಿಕೆ ನೀಡಿದ್ದ. ನಂತರ ಕಂದಾಯ ಭವನದಲ್ಲಿದ್ದ ವರ್ಷಾ ಒಡೆಯರ್‌ ಕಚೇರಿಗೆ ರಮೇಶ್‌ ಜತೆ ಪೊಲೀಸರು ತೆರಳಿದ್ದಾರೆ. ಆಗ ಕಾಂತರಾಜ್‌ ಅವರಿಂದ ಹಣ ಸಂದಾಯವಾಗಿದೆ ಎಂದು ಹೇಳಿ ರಮೇಶ್‌ ನೀಡಿದ ಲಂಚದ ಹಣವನ್ನು ಸ್ವೀಕರಿಸಿದ ಕೂಡಲೇ ವಿಶೇಷ ತಹಸೀಲ್ದಾರ್‌ ವರ್ಷಾ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಚೇರಿಗೆ ನಕಲಿ‌ ಲೋಕಾಯುಕ್ತ ದಾಳಿ, ಐಡಿಕಾರ್ಡ್ ಕೇಳಿದ್ದೇ ಕಾಲ್ಕಿತ್ತ!

ಸೇವೆಗೆ ಸೇರಿ 8 ವರ್ಷಕ್ಕೆ ಜೈಲು

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ವರ್ಷಾ ಒಡೆಯರ್‌, 2014ನೇ ಸಾಲಿನ ಕೆಎಎಸ್‌ ಅಧಿಕಾರಿಯಾಗಿದ್ದಾರೆ. ಚಾಮರಾಜ ನಗರ ಜಿಲ್ಲೆಯ ಯಳಂದೂರು ಮತ್ತು ಕನಕಪುರ ತಾಲೂಕಿನಲ್ಲಿ ತಹಸೀಲ್ದಾರ್‌ ಆಗಿ ಸೇವೆ ಸಲ್ಲಿಸಿದ್ದ ಅವರು, ಕೆಲ ತಿಂಗಳ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್‌ ಹುದ್ದೆಗೆ ವರ್ಗವಾಗಿದ್ದರು.

Follow Us:
Download App:
  • android
  • ios