Bengaluru: ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿ ವ್ಯಕ್ತಿಯಿಂದ ಹಣ ವಸೂಲಿ, ಹೆಡ್ ಕಾನ್ಸ್ ಟೇಬಲ್ ಸಸ್ಪೆಂಡ್!
ವ್ಯಕ್ತಿಯ ಅಕ್ರಮ ಬಂಧನ ಹಾಗೂ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಅನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು (ಏ.19): ವ್ಯಕ್ತಿಯ ಅಕ್ರಮ ಬಂಧನ ಹಾಗೂ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಅನ್ನು ಅಮಾನತು ಮಾಡಲಾಗಿದೆ. ಹೆಡ್ ಕಾನ್ಸ್ ಟೇಬಲ್ ಲಕ್ಷ್ಮಣ್ ಪವಾರ್ ಎಂಬಾತನನ್ನು ಅಮಾನತು ಮಾಡಲಾಗಿದ್ದು, 40 ಸಾವಿರ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಆದೇಶ ಹೊರಡಿಸಿದ್ದಾರೆ. ಆಶೀಶ್ ಕ್ಲೋಹಿ ಎಂಬುವವರನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪ ಸಾಬೀತಾಗಿದೆ. ಬಂಡೆಪಾಳ್ಯ ಠಾಣೆಯಲ್ಲಿ ಅಕ್ರಮ ಬಂಧನ ಮಾಡಿ ಜೊತೆಗೆ ಆಶೀಶ್ ಕ್ಲೋಹಿಗೆ ಮಾನಸಿಕ ಹಿಂಸೆ ನೀಡಿದ್ದ. ಈ ಬಗ್ಗೆ ಡಿಸಿಪಿಗೆ ಆಶೀಶ್ ಕ್ಲೋಹಿ ದೂರು ನೀಡಿದ್ದರು. ದೂರು ಸ್ವೀಕರಿಸಿದ ಡಿಸಿಪಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದರು. ವಿಚಾರಣೆ ವೇಳೆ ಲಕ್ಷ್ಮಣ್ ಪವಾರ್ ತಪ್ಪು ಕಂಡು ಬಂದಿತ್ತು. ಹೀಗಾಗಿ ಹೆಚ್ ಸಿ.ಲಕ್ಷ್ಮಣ್ ಪವಾರ್ ಸಸ್ಪೆಂಡ್ ಮಾಡಿ ಆದೇಶ ಹೊರಬಿದ್ದಿದೆ. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದ ಲಕ್ಷ್ಮಣ್ ಈಗ ಉದ್ಯೋಗ ಕಳೆದುಕೊಂಡಿದ್ದಾನೆ. ಈ ಹಿಂದೆ ಡಿಸಿಪಿ ಸ್ಕ್ವಾಡ್ ನಲ್ಲಿ ಲಕ್ಷ್ಮಣ್ ಕರ್ತವ್ಯ ನಿರ್ವಹಿಸಿದ್ದನು. ಇದೇ ರೀತಿ ಹಲವರಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡಿದ ಆರೋಪ ಕೂಡ ಲಕ್ಷ್ಮಣ್ ಮೇಲಿದೆ.
ಖಾಲಿ ಜಾಗದ ಕಸಕ್ಕೆ ಬೆಂಕಿ: ಅಪರಿಚಿತ ವ್ಯಕ್ತಿ ದಹನ
ಬೆಂಗಳೂರು: ಖಾಲಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತಪುರ ಮುಖ್ಯರಸ್ತೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ 40 ರಿಂದ 45 ವರ್ಷ ವಯೋಮಾನದವನಾಗಿದ್ದು, ಚಿಂದಿ ಆಯುವ ವ್ಯಕ್ತಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಸಂತಪುರ ಮುಖ್ಯರಸ್ತೆಯ ಖಾಲಿ ಪ್ರದೇಶದಲ್ಲಿ ತಾಜ್ಯ ರಾಶಿಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಈ ದುರ್ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಮೃತದೇಹ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
4ನೇ ಮಹಡಿಯಿಂದ ಬಿದ್ದು ಮುಂಬೈನ ಮಹಿಳೆ ಸಾವು
ಬೆಂಗಳೂರು: ತಮ್ಮ ಮನೆಯ ನಾಲ್ಕನೇ ಮಹಡಿಯಿಂದ ಬಿದ್ದು ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಕೊತ್ತನೂರು ದಿಣ್ಣೆ ನಿವಾಸಿ ಸೋನು ಪೂಜಾರಿ (34) ಮೃತ ದುರ್ದೈವಿ. ಈ ಘಟನೆ ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ ನಡೆದಿದೆಯೇ ಎಂಬುದು ಖಚಿತವಾಗಿಲ್ಲ. ಮನೆಯ ಮಹಡಿಯಿಂದ ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿದ್ದ ಸೋನು ಪೂಜಾರಿಯನ್ನು ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಆರು ತಿಂಗಳಿಂದ ಕೊತ್ತನೂರು ದಿಣ್ಣೆಯಲ್ಲಿ ಮಹಾರಾಷ್ಟ್ರ ಮೂಲದ ಸೋನು ಪೂಜಾರಿ ಹಾಗೂ ನಿರಂಜನ್ ಪೂಜಾರಿ ದಂಪತಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ನಿರಂಜನ್, ಕೆಲಸದ ನಿಮಿತ್ತ ಮುಂಬೈಗೆ ಸೋಮವಾರ ತೆರಳಿದ್ದರು. ಮನೆಯಲ್ಲಿ ಸೋನು ಒಬ್ಬರೇ ಇದ್ದರು. ಆಗ ಈ ದುರಂತ ನಡೆದಿದೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕೌಟುಂಬಿಕ ವಿಚಾರವಾಗಿ ಸೋನು ದಂಪತಿ ನಡುವಿನ ಮನಸ್ತಾಪ ಇದ್ದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಮೃತ ಸೋನು ಪೂಜಾರಿಗೆ ಹೆತ್ತವರು ಇಲ್ಲ. ಅನಾಥಳಾದ ಆಕೆಯನ್ನು ನಿರಂಜನ್ ಮದುವೆಯಾಗಿದ್ದ. ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.