ಬೆಂಗಳೂರು ವಿ.ವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಆ್ಯಕ್ಸಿಡೆಂಟ್ ಪ್ರಕರಣ: ಚಿಕ್ಸಿತೆ ಫಲಕಾರಿಯಾಗದೆ ಶಿಲ್ಪ ಸಾವು
ಕಳೆದ ಅಕ್ಟೋಬರ್ 10ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಶಿಲ್ಪಾ ಎಂಬ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಾ ಇಂದು ಮುಂಜಾನೆ 4:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು (ಅ.23): ಕಳೆದ ಅಕ್ಟೋಬರ್ 10ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಶಿಲ್ಪಾ ಎಂಬ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಾ ಇಂದು ಮುಂಜಾನೆ 4:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಶಿಲ್ಪಾಶ್ರೀ ಬೆಂಗಳೂರು ವಿಶ್ವವಿದ್ಯಾಲಯದ ಎಂಎಸ್ಸಿ ಗಣಿತ ವಿಷಯದ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಜ್ಞಾನಭಾರತಿ ಕ್ಯಾಂಪಸ್‌ನ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಾಗಿ ಕಾಯುತ್ತಿದ್ದರು.
ಈ ವೇಳೆ ಬಸ್ ಬಂದಿದ್ದು, ಶಿಲ್ಪಾಶ್ರೀ ಬಸ್‌ನ ಮಧ್ಯದ ಬಾಗಿಲಿನಲ್ಲಿ ಬಸ್ ಏರಲು ಮುಂದಾಗಿದ್ದಾರೆ. ಈ ವೇಳೆ ಬಸ್ ಏಕಾಏಕಿ ಮುಂದೆ ಚಲಿಸಿದ್ದರಿಂದ ಶಿಲ್ಪಾಶ್ರೀ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಎಡಭಾಗದ ಹಿಂಬದಿ ಚಕ್ರ ಶಿಲ್ಪಾಶ್ರೀಯ ಸೊಂಟದ ಎಡ ತೊಡೆಯ ಮೇಲೆ ಉರುಳಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿನಿ ಇಂದು ಚಿಕ್ಸಿತೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿ: 10 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಬೆಂ.ವಿವಿ ಕ್ಯಾಂಪಸ್ ಒಳಗೆ ವಾಹನ ನಿಷೇಧಕ್ಕೆ ವಿದ್ಯಾರ್ಥಿಗಳ ಬಿಗಿ ಪಟ್ಟು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸೋಮವಾರ ಬೆಳಗ್ಗೆ ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್ ಹರಿದು ಗಂಭೀರ ಗಾಯಗೊಂಡ ಹಿನ್ನೆಲೆ ಕ್ಯಾಂಪಸ್ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು. ಘಟನೆ ಬೆನ್ನಲ್ಲೇ ಕ್ಯಾಂಪಸ್‌ನ ಪ್ರಮುಖ ರಸ್ತೆಯಲ್ಲಿ ಜಮಾವಣೆಗೊಂಡ ಸಾವಿರಾರು ವಿದ್ಯಾರ್ಥಿಗಳು ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಚಾಲಕನನ್ನು ಕೂಡಲೇ ಬಂಧಿಸಬೇಕು.
ವಿದ್ಯಾರ್ಥಿನಿ ಶಿಲ್ಪಾಶ್ರೀ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಿದ್ಯಾರ್ಥಿನಿಯ ಕಾಲು, ಸೊಂಟದ ಮೇಲೆ ಚಕ್ರ ಹರಿದಿರುವುದರಿಂದ ಮುಂದೆ ಸಹಜ ಜೀವನ ಕಷ್ಟವಾದ್ದರಿಂದ ಆಕೆಯ ಆರೈಕೆಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜೊತೆಗೆ ಕ್ಯಾಂಪಸ್‌ನೊಳಗೆ ಸಾರ್ವಜನಿಕ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇಂತಹ ಅಪಘಾತಗಳು ಮರುಕಳಿಸುತ್ತಿವೆ. ವಿದ್ಯಾರ್ಥಿಗಳ ಭಯಭೀತಿಯಿಂದ ಓಡಾಡುವಂತಾಗಿದೆ. ಹಾಗಾಗಿ ಸರ್ಕಾರ ಸಾರ್ವಜನಿಕ ವಾಹನಗಳಿಗೆ ಕ್ಯಾಂಪಸ್ ರಸ್ತೆಯಲ್ಲಿ ಸಂಚಾರ ನಿಬಂರ್‍ಧಿಸಬೇಕು ಎಂದು ಒತ್ತಾಯಿಸಿದ್ದರು.
ಗೆಳೆಯನ ಹುಟ್ಟುಹಬ್ಬಕ್ಕೆ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿ ಜೀವ ತೆತ್ತ ಯುವತಿ..!
ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ವಿವಿಯ ಕುಲಪತಿ ಡಾ. ಜಯಕರ ಅವರು ವಿವಿಧ ಸಿಂಡಿಕೇಟ್ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚವನ್ನು ವಿವಿಯಿಂದಲೇ ಭರಿಸಲಾಗುವುದು. ತಮ್ಮ ಬೇಡಿಕೆಯಂತೆ ಕ್ಯಾಂಪಸ್ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದೇ ವೇಳೆ, ಬಿಎಂಟಿಸಿ, ಬಿಬಿಎಂಪಿ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ತಮ್ಮ ಬೇಡಿಕೆ ಈಡೇರುವವರೆಗೆ ಶತಾಯಗತಾಯ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು, ಸೋಮವಾರ ಸಂಜೆ ಸುರಿದ ಮಳೆಯನ್ನೂ ಲೆಕ್ಕಸಿದೆ ಆಹೋರಾತ್ರಿ ಪ್ರತಿಭಟನೆಗೆ ಮುಂದಾದರು.