ದೊಡ್ಡಬಳ್ಳಾಪುರ(ಮೇ.28):  ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ತುತ್ತಾಗಿದ್ದ ನೇಕಾರರೊಬ್ಬರು ಮಗ್ಗದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ನಗರದ ವಿದ್ಯಾನಗರದ ನೇಕಾರ ಕೆ.ವಿ.ರವೀಂದ್ರ(54) ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ವಾರವಷ್ಟೇ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. 

ಮೈಸೂರು : ಆತ್ಮಹತ್ಯೆಗೆ ಶರಣಾದ ಕೋವಿಡ್ ಸೆಂಟರ್ ಸ್ಟಾಫ್ ನರ್ಸ್

ಕೆಲ ದಿನಗಳ ಚಿಕಿತ್ಸೆ ಬಳಿಕ ಬ್ಲಾಕ್‌ ಫಂಗಸ್‌ ಸೋಂಕು ಪತ್ತೆಯಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರವೀಂದ್ರ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಜತೆ ಜಗಳವಾಡಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ಬುಧವಾರ ರಾತ್ರಿ ಮನೆಗೆ ವಾಪಸಾಗಿದ್ದರು ಎಂದು ತಿಳಿದು ಬಂದಿದೆ. ಮನೆ ಮಂದಿ ಎಲ್ಲಾ ಜತೆಗೆ ಊಟ ಮಾಡಿ ನಿದ್ರಿಸಿದ ನಂತರ ಅವರು ಮಗ್ಗದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.