ಬೆಂಗಳೂರು(ಜ.11): ದ್ವಿಚಕ್ರ ವಾಹನದ ಪೆಟ್ರೋಲ್‌ ಟ್ಯಾಂಕ್‌ ಸ್ಫೋಟಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ಕೆ.ಪಿ.ಅಗ್ರಹಾರದ ಚೋಳರಪಾಳ್ಯದಲ್ಲಿ ನಡೆದಿದೆ.

ಚೋಳರಪಾಳ್ಯ ನಿವಾಸಿಗಳಾದ ಅಣ್ಣಮಲೈ(40), ನಂಜುಂಡ (22), ಪುನೀತ್‌ (28), ವಿಶ್ವನಾಥ್‌ (35) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಅಣ್ಣಾಮಲೈ ಮತ್ತು ನಂಜುಂಡ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣಾಮಲೈ ಚೋಳರಪಾಳ್ಯದಲ್ಲಿ ದ್ವಿಚಕ್ರ ವಾಹನ ಗ್ಯಾರೇಜ್‌ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆ ದ್ವಿಚಕ್ರ ವಾಹನವೊಂದರ ಸರ್ವೀಸ್‌ ಮಾಡುವ ಸಲುವಾಗಿ ಅದರ ಪೆಟ್ರೋಲ್‌ ಟ್ಯಾಂಕ್‌ನ್ನು ಬಿಚ್ಚಿ ಗ್ಯಾರೇಜ್‌ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ಸಮೀಪ ಇಟ್ಟಿದ್ದರು. ಆ ವೇಳೆ ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿಯ ಕಿಡಿ ಪೆಟ್ರೋಲ್‌ ಟ್ಯಾಂಕ್‌ಗೆ ತಾಗಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಗ್ಯಾರೇಜ್‌ನಲ್ಲಿದ್ದ ಅಣ್ಣಾಮಲೈ ಹಾಗೂ ಇತರರು ಬೆಂಕಿ ಆರಿಸಲು ಪ್ರಯತ್ನಿಸಿದಾಗ ಏಕಾಏಕಿ ಪೆಟ್ರೋಲ್‌ ಟ್ಯಾಂಕ್‌ ಸ್ಫೋಟಗೊಂಡಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.

ಕದ್ದ ಹಣದಲ್ಲಿ ದುಬಾರಿ ಕಾರು ಖರೀದಿ, ಸಮಾಜ ಸೇವೆ; ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳ!

ಟ್ಯಾಂಕ್‌ನಲ್ಲಿ ಪೆಟ್ರೋಲ್‌ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಗ್ಯಾರೇಜ್‌ ಸಿಬ್ಬಂದಿಯ ಅಜಾಗರೂಕತೆಯಿಂದ ಅವಘಡ ಸಂಭವಿಸಿದೆ ಎಂದು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ದಾಬಸ್‌ಪೇಟೆ(ಜ.11): ಅಪರಿಚಿತ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಂಪುರ ಹೋಬಳಿಯ ಹನುಮಂತಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ರ ಬೆಂಗಳೂರು-ತುಮಕೂರು ರಸ್ತೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಹೂವಿನಕಟ್ಟೆಮೂಲದ ವೆಂಕಟೇಶ್‌ಮೂರ್ತಿ (33) ಮೃತ ದುರ್ದೈವಿ. ವೆಂಕಟೇಶ್‌ ಶನಿವಾರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ತನ್ನ ಸ್ವಗ್ರಾಮ ಹೂವಿನಕಟ್ಟೆದಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ, ನಿದ್ದೆ ಮಂಪರಿನಲ್ಲಿ ಬೈಕ್‌ ನಿಯಂತ್ರಣ ತಪ್ಪಿದ್ದು ಮುಂಭಾಗ ಹೋಗುತ್ತಿದ್ದ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಬಿದ್ದ ಪರಿಣಾಮ ತೀವ್ರವಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.