ದಾವಣಗೆರೆ(ಜೂ.09): ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ತಂದೆ ಹಾಗೂ 3 ವರ್ಷದ ಮಗಳು ಸಾವನ್ನಪ್ಪಿ, ಮತ್ತೊಬ್ಬ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕನ ಬೆಳವನೂರು ಸಮೀಪ ಸೋಮವಾರ ಸಂಭವಿಸಿದೆ.

ತಾಲೂಕಿನ ತುರ್ಚಘಟ್ಟ ಗ್ರಾಮದ ಆರ್‌.ಸಿದ್ದೇಶ್‌ (29) ಹಾಗೂ ಮಗಳು ಕೀರ್ತನಾ (3) ಮೃತ ದುರ್ದೈವಿಗಳು. ಘಟನೆಯಲ್ಲಿ ಸಿದ್ದೇಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾಳೆ. 3 ವರ್ಷದ ಮತ್ತೊಂದು ಮಗು ಪ್ರಿಯಾಂಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆ- ಲೋಕಿಕೆರೆ ರಸ್ತೆಯ ಶ್ರೀ ರಾಮಾಂಜನೇಯ ರೈಸ್‌ ಮಿಲ್‌ ಬಳಿ ಮಕ್ಕಳನ್ನು ಆಸ್ಪತ್ರೆಗೆಂದು ಸಿದ್ದೇಶ್‌ ಬೈಕ್‌ನಲ್ಲಿ ದಾವಣಗೆರೆಗೆ ಕರೆದೊಯ್ಯುತ್ತಿದ್ದರು. ಆಗ ಎದುರಿನಿಂದ ತುರ್ಚಘಟ್ಟ ಕಡೆಗೆ ಅತಿ ವೇಗವಾಗಿ, ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿಕೊಂಡು ಬರುತ್ತಿದ್ದ ಇಬ್ಬರು ಸಿದ್ದೇಶ್‌ ಬೈಕ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

ಪಾರ್ಕಿಂಗ್ ಲಾಟ್‌ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಬೆಂಝ್

ಘಟನೆಯಲ್ಲಿ ಸಿದ್ದೇಶ್‌ ತಲೆ, ಎದೆಭಾಗ, ಕಣ್ಣಿನ ಬಲಭಾಗಕ್ಕೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮಗು ಪ್ರಿಯಾಂಕಗೆ ಎದೆ ಭಾಗ, ಬಲಗೈ, ತಲೆ ಭಾಗಕ್ಕೆ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದೆ. ಮತ್ತೊಂದು ಮಗು ಕೀರ್ತನಾಗೆ ಸಣ್ಣಪುಟ್ಟಗಾಯಗಳಾಗಿವೆ. ಘಟನೆಯಲ್ಲಿ ಎರಡೂ ಬೈಕ್‌ ಸಂಪೂರ್ಣ ಜಖಂಗೊಂಡಿವೆ. ಅಪಘಾತಕ್ಕೆ ಕಾರಣನಾದ ಬೈಕ್‌ ಚಾಲಕನ ವಿರುದ್ಧ ಹದಡಿ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಗ್ರಾಮಾಂತರ ಡಿವೈಎಸ್‌ಪಿ ಪಿ.ವಿ. ನರಸಿಂಹ, ಹದಡಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಬಸ್‌-ಬೈಕ್‌ ಡಿಕ್ಕಿ: ಶಿವಮೊಗ್ಗ ವ್ಯಕ್ತಿ ಸಾವು

ತರೀಕೆರೆ: ಪಟ್ಟಣ ಸಮೀಪದ ಎಂ.ಸಿ.ಹಳ್ಳಿ ಚಾನಲ್‌ ಬಳಿ ಸೋಮವಾರ ರಾಷ್ಟ್ರೀಯ ಹೆದ್ದಾರಿ​- 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ಗಾಯಗಳಾದ ಘಟನೆ ಸಂಭವಿಸಿದೆ.

ಶಿವಮೊಗ್ಗ ಮೂಲದ ಪ್ರಶಾಂತ (30) ಮೃತಪಟ್ಟವ್ಯಕ್ತಿ. ರಘು (27) ಗಾಯಗೊಂಡವರು. ಬಸ್‌ ಭದ್ರಾವತಿ ಕಡೆಯಿಂದ ತರೀಕೆರೆ ಕಡೆಗೆ ಬರುತ್ತಿತ್ತು. ಬೈಕ್‌ ತರೀಕೆರೆ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದಾಗ ಈ ಅಫಘಾತ ಸಂಭವಿಸಿದೆ. ಗಾಯಾಳು ರಘು ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ತೆರಳಿದ್ದಾರೆ. ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.