Haveri Crime: ಅಂತಾರಾಜ್ಯ ಖದೀಮರ ಬಂಧನ
* ಶಿಗ್ಗಾಂವಿ ಶೂಟೌಟ್ ಪ್ರಕರಣದ ಆರೋಪಿಗೆ ಪಿಸ್ತೂಲ್ ನೀಡಿದ್ದ ಗ್ಯಾಂಗ್
* ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ ಘೋಷಿಸಿದ ಪೊಲೀಸ್ ಇಲಾಖೆ
* ಪಿಸ್ತೂಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ
ಹಾವೇರಿ(ಮೇ.31): ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಶೂಟೌಟ್ ಮಾಡಿದ್ದ ಆರೋಪಿಗೆ ಕಂಟ್ರಿ ಪಿಸ್ತೂಲ್ ಪೂರೈಸಿದ್ದ ಬಿಹಾರದ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಕೆಜಿಎಫ್- 2 ಚಿತ್ರಪ್ರದರ್ಶನದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ವಸಂತ ಶಿವಪುರ ಎಂಬಾತನ ಮೇಲೆ ಮಂಜುನಾಥ ಅಲಿಯಾಸ್ ಮಲ್ಲಿಕ್ ಪಾಟೀಲ ಎಂಬಾತ ಗುಂಡು ಹಾರಿಸಿದ್ದ. ಈತನನ್ನು ಮೇ 19ರಂದು ಬಂಧಿಸಿದ್ದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪಿಸ್ತೂಲ್ ಪೂರೈಸಿದವರ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದ ಮೇಲೆ ಬಿಹಾರ ರಾಜ್ಯದ ಮಂಗೇರ ಜಿಲ್ಲೆ ಮಿರ್ಜಾಪುರ ಬರದಾ ಗ್ರಾಮದಲ್ಲಿ ಅಕ್ರಮವಾಗಿ ಪಿಸ್ತೂಲ್ ತಯಾರಿಸಿ ಗುಂಡುಗಳನ್ನು ನೀಡಿದ್ದ ಮೊಹಮ್ಮದ ಸಮ್ಸದ್ ಅಲಾಮ ಮತ್ತು ಆತನ ಸಹಚರರಾದ ಮೊಹಮ್ಮದ್ ಆಸೀಫ್ ಅಲಾಮ ಮತ್ತು ಮೊಹಮ್ಮದ್ ಸಾಹಿದಚಂದ್ ಮಹಮ್ಮದ್ ಖಾಸೀಮ್ ಎಂಬುವರನ್ನು ಬಂಧಿಸಲಾಗಿದೆ.
ಹಾವೇರಿ ಗ್ರಾಮೀಣ ಭಾಗದಲ್ಲಿ ಡೀಸೆಲ್‌ಗೆ ಹಾಹಾಕಾರ, ಬಿತ್ತನೆ ಹುರುಪಿನಲ್ಲಿದ್ದ ರೈತರಿಗೆ ಆತಂಕ
ಬಿಹಾರ ಪೊಲೀಸ್ ಇಲಾಖೆ ನೆರವಿನೊಂದಿಗೆ ಈ ಮೂವರು ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ವಿಶೇಷ ತಂಡವು ಬಂದೋಬಸ್ತ್‌ನಲ್ಲಿ ಇಲ್ಲಿಗೆ ಕರೆದುಕೊಂಡು ಬರುತ್ತಿದೆ.
ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಏ. 19ರಂದು ರಾತ್ರಿ ಕೆಜಿಎಫ್ ಸಿನಿಮಾ ಪ್ರದರ್ಶನದ ವೇಳೆ ಕುರ್ಚಿ ಮೇಲೆ ಕಾಲಿಟ್ಟಿದ್ದಕ್ಕೆ ವಸಂತ ಶಿವಪುರ ಎಂಬಾತನ ಮೇಲೆ ಮಂಜುನಾಥ ಪಾಟೀಲ ಎಂಬಾತ ಪಿಸ್ತೂಲ್‌ನಲ್ಲಿ ಗುಂಡು ಹಾರಿಸಿದ್ದ. ಒಂದು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈತನಿಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿ ಮಂಜುನಾಥ ಪಾಟೀಲನ ಹೇಳಿಕೆ ಆಧರಿಸಿ ಪಿಸ್ತೂಲ್ ಸಿಕ್ಕಿರುವ ಮೂಲವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಡಿಜಿ ಐಜಿಪಿ ಪ್ರವೀಣ ಸೂದ್, 1 ಲಕ್ಷ ಬಹುಮಾನವನ್ನು ಘೋಷಣೆ ಮಾಡಿದ್ದಾರೆ ಎಂದು ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ ತಿಳಿಸಿದ್ದಾರೆ.